ಉಗ್ರರ ದಾಳಿ: ವಿವಿಧ ಪಕ್ಷಗಳಿಂದ ಪ್ರತಿಭಟನೆ

ಚಿಕ್ಕಮಗಳೂರು, ಸೆ.20: ಜಮ್ಮು-ಕಾಶ್ಮೀರ ಉರಿ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದ ವಿವಿಧ ಪಕ್ಷಗಳ ಮುಖಂಡರು ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಚಿಕ್ಕಮಗಳೂರಿನ ತಾಲೂಕು ಕಚೇರಿಯಿಂದ ಹನುಮಂತಪ್ಪವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್, ಸಿಪಿಐ, ಬಿಎಸ್ಪಿ, ಜೆಡಿ(ಎಸ್) ಪಕ್ಷಗಳ ಮುಖಂಡರು ಸಭೆ ನಡೆಸಿ ಉಗ್ರರ ದಾಳಿಯಲ್ಲಿ ಅಸುನೀಗಿದ ಹುತಾತ್ಮ ಸೈನಿಕರಿಗೆ ವೌನಾಚರಿಸಿ ಗೌರವ ಸಲ್ಲಿಸಿದರು.
ಭಯೋತ್ಪಾದಕ ಕೃತ್ಯಗಳನ್ನು ತಡೆಗಟ್ಟುವಲ್ಲಿ ಬಿಜೆಪಿ ನೇತೃತ್ವದ ಮೋದಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೂಡಲೇ ಪಾಕಿಸ್ತಾನದೊಂದಿಗಿನ ಎಲ್ಲಾ ರೀತಿಯ ರಾಜತಾಂತ್ರಿಕ ಸಂಬಂಧವನ್ನು ಕಡಿದು ಹಾಕಿ ಪಾಕ್ ಪ್ರಚೋದಿತ ಉಗ್ರಗಾಮಿಗಳ ಹುಟ್ಟನ್ನಡಗಿಸಲು ಕಠಿಣ ನಿಲುವು ತೆಗೆದುಕೊಳ್ಳಬೇಕೆಂದು ಮೋದಿ ಸರಕಾರವನ್ನು ಆಗ್ರಹಿಸಿದರು.
ಹನುಮಂತಪ್ಪವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಎಂ.ಎಲ್. ಮೂರ್ತಿ ಮಾತನಾಡಿ, ಬಿಜೆಪಿ ನೇತೃತ್ವದ ಮೋದಿ ಸರಕಾರ ಆಡಳಿತಕ್ಕೆ ಬಂದ ನಂತರ ಉಗ್ರರ ದಾಳಿಗಳು ಹೆಚ್ಚುತ್ತವೆ. ಅವುಗಳನ್ನು ತಡೆಯಲು ಸರಕಾರ ರಚನಾತ್ಮಕ ರಣನೀತಿ ರೂಪಿಸುವಲ್ಲಿ ವಿಫಲವಾಗಿದೆ. ಬಾಯಿಯಲ್ಲಿ ದೇಶಭಕ್ತಿ ಉವಾಚಿಸುವ ಮೋದಿ ಪಡೆ ಇಂದು ಸೈನಿಕರ ಮಾರಣ ಹೋಮ ನಡೆದಾಗ ವೌನಕ್ಕೆ ಶರಣಾಗಿರುವುದನ್ನು ಕಟುವಾಗಿ ಟೀಕಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ರೇಣುಕಾರಾಧ್ಯ, ಜನತಾ ದಳ(ಎಸ್) ಜಿಲ್ಲಾಧ್ಯಕ್ಷ ಮಂಜಪ್ಪ, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ, ಬಿ. ಅಮ್ಜದ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಸಿಪಿಐ ಮುಖಂಡ ಎಸ್.ಎಲ್.ರಾಧಾ ಸುಂದರೇಶ್, ಎಚ್.ಎನ್. ಮಹೇಶ್, ಜಾರ್ಜ್ ಆಸ್ಟಿನ್, ಶಶಿಕುಮಾರ್, ಮಲ್ಲೇಶ್, ಜಿ.ಕೆ.ಬಸವರಾಜ್, ಗಂಗಾಧರ್ ಪಾಲ್ಗೊಂಡಿದ್ದರು.







