ಜಿಯಾ ಖಾನ್ ನೇಣು ಪೂರ್ವಯೋಜಿತ
ಬ್ರಿಟಿಷ್ ವಿಧಿವಿಜ್ಞಾನ ತಜ್ಞರ ಅಭಿಮತ
ಮುಂಬೈ,ಸೆ.20: ಬಾಲಿವುಡ್ ನಟಿ ಜಿಯಾ ಖಾನ್ ನೇಣು ಪೂರ್ವ ಯೋಜಿತವಾಗಿತ್ತು ಮತ್ತು ಆಕೆಯ ಮುಖ ಹಾಗೂ ಕುತ್ತಿಗೆಯಲ್ಲಿನ ಗಾಯದ ಗುರುತುಗಳು ಅದು ಆತ್ಮಹತ್ಯೆಯಾಗಿರಲಿಲ್ಲ ಎನ್ನುವುದನ್ನು ಬೆಟ್ಟು ಮಾಡುತ್ತಿವೆ ಎಂದು ಬ್ರಿಟಿಷ್ ವಿಧಿವಿಜ್ಞಾನ ತಜ್ಞ ಜೇಸನ್ ಪಾಯ್ನೆ-ಜೇಮ್ಸ್ ತನ್ನ ವರದಿಯಲ್ಲಿ ಹೇಳಿದ್ದಾರೆ. ಇದರೊಂದಿಗೆ ಜಿಯಾ ಆತ್ಮಹತ್ಯೆ ಪ್ರಕರಣವೀಗ ಆಘಾತಕಾರಿ ತಿರುವನ್ನು ಪಡೆದುಕೊಂಡಿದೆ.
ಜೇಮ್ಸ್ ವರದಿಯಲ್ಲಿನ ಅಂಶಗಳು ಭಾರತೀಯ ತಜ್ಞರ ವರದಿಗೆ ವಿರುದ್ಧವಾಗಿವೆ ಎಂದು ಆಂಗ್ಲ ಪತ್ರಿಕೆಯೊಂದು ಮಂಗಳವಾರ ವರದಿ ಮಾಡಿದೆ. ಜಿಯಾರ ತಾಯಿ ರಾಬಿಯಾ ಅವರು ಈ ವರದಿ ಯನ್ನು ಬುಧವಾರ ಮುಂಬೈ ಸೆಷನ್ಸ್ ನ್ಯಾಯಾ ಲಯಕ್ಕೆ ಸಲ್ಲಿಸಲಿದ್ದಾರೆ ಎಂದೂ ಅದು ಹೇಳಿದೆ.
ವರದಿಯಲ್ಲಿ ಏನಿದೆ?: ತನ್ನ ತನಿಖೆಯ ಅಂಗವಾಗಿ ವೈದ್ಯಕೀಯ ಮತ್ತು ಮರಣೋತ್ತರ ಪರೀಕ್ಷೆ ವರದಿಗಳ ಅಧ್ಯಯನ ನಡೆಸಿರುವ ಜೇಮ್ಸ್ ಜಿಯಾರ ಮೃತದೇಹದ ಚಿತ್ರಗಳನ್ನು ವಿಶ್ಲೇಷಿಸಿದ್ದಾರೆ. ಜೊತೆಗೆ ಸಿಸಿಟಿವಿ ತುಣುಕುಗಳು ಮತ್ತು ಜಿಯಾರ ಕೋಣೆಯ ಚಿತ್ರಗಳನ್ನು ಪುನರ್‌ಪರಿಶೀಲಿಸಿದ್ದಾರೆ. ಜಿಯಾರ ಕೆಳತುಟಿಯ ಮೇಲಿನ ಗಾಯದ ಗುರುತುಗಳು ಆಕೆ ನೇಣು ಬಿಗಿದುಕೊಳ್ಳುತ್ತಿದ್ದಾಗ ಹಲ್ಲಿನೊಂದಿಗೆ ಘರ್ಷಣೆಯಿಂದಾಗಿ ಆಗಿರ ಬಹುದು ಎಂದು ಸರಕಾರಿ ವಿಧಿವಿಜ್ಞಾನ ತಜ್ಞರು ಅಭಿಪ್ರಾಯಪಟ್ಟಿದ್ದರೆ, ಇವು ತರಚು ಗಾಯಗಳಾಗಿವೆ ಮತ್ತು ಬಾಯಿಯನ್ನು ಒತ್ತಿ ಹಿಡಿಯಲಾಗಿತ್ತು ಎನ್ನುವುದನ್ನು ಸೂಚಿಸುತ್ತಿವೆ. ಅವು ಮಾಮೂಲಿ ಹಲ್ಲುಗಳ ಗುರುತಲ್ಲ ಎಂದು ಜೇಮ್ಸ್ ವರದಿಯಲ್ಲಿ ಹೇಳಿದ್ದಾರೆ.
ಜಿಯಾರ ಕುತ್ತಿಗೆಯ ಮೇಲಿನ ನೂಲಿನ ಎಳೆಯ ಗಾಯಗಳ ಗುರುತುಗಳು ನೇಣು ಹಾಕಿಕೊಳ್ಳಲು ಬಳಸಿದ್ದ ದುಪಟ್ಟಾ ಜಾರಿದಾಗ ಅಥವಾ ದುಪಟ್ಟಾದ ಗಂಟು ತಗುಲಿ ಆಗಿರಬಹುದು ಎಂದು ಸರಕಾರಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರೆ ಜೇಮ್ಸ್, ದುಪಟ್ಟಾ ಜಾರಿದಾಗ ಕುತ್ತಿಗೆಯ ಮೇಲೆ ಇಷ್ಟೊಂದು ಸ್ಪಷ್ಟವಾದ ಗುರುತು ಮೂಡುವುದು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ ಜಿಯಾರ ಕೆಳದವಡೆಯ ಮೇಲಿನ ಗುರುತುಗಳು ದುಪಟ್ಟಾದ ಹಲವಾರು ಗಂಟುಗಳಿಂದ ಆಗಿರುವ ಸಾಧ್ಯತೆಯಿದೆ ಎಂಬ ಸ್ಥಳೀಯ ತಜ್ಞರ ಅಭಿಪ್ರಾಯವನ್ನೂ ಅವರು ತಳ್ಳಿಹಾಕಿದ್ದಾರೆ.
ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ಕೊಲೆಯನ್ನು ಶಂಕಿಸಲು ಯಾವುದೇ ಕಾರಣಗಳಿಲ್ಲ ಎಂದು ಸಿಬಿಐ ತಿಂಗಳ ಹಿಂದೆ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.
ಜಿಯಾ ಖಾನ್ ಮೃತದೇಹ 2013,ಜೂನ್ 3ರಂದು ಮುಂಬೈ ಜುಹುದಲ್ಲಿನ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆಯ ಬಾಯ್‌ಫ್ರೆಂಡ್ ಆಗಿದ್ದ,ಹಿರಿಯ ಬಾಲಿವುಡ್ ನಟ ಆದಿತ್ಯ ಪಂಚೋಲಿಯ ಪುತ್ರ ಸೂರಜ್ ಪಂಚೋಲಿಯನ್ನು ಬಂಧಿಸಿ ಬಳಿಕ ಬಿಡುಗಡೆ ಗೊಳಿಸಲಾಗಿತ್ತು. ಸಿಬಿಐ ಕಳೆದ ಡಿಸೆಂಬರ್‌ನಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪವನ್ನು ಸೂರಜ್ ಮೇಲೆ ಹೊರಿಸಿತ್ತು. ಆದರೆ ಇದರಿಂದ ತೃಪ್ತರಾಗದ ರಾಬಿಯಾ ಬ್ರಿಟನ್ನಿನ ಫಾರೆನ್ಸಿಕ್ ಹೆಲ್ತ್‌ಕೇರ್ ಸರ್ವಿಸಸ್‌ನ ಜೇಮ್ಸ್‌ರನ್ನು ನಿಯೋಜಿಸಿಕೊಂಡಿದ್ದರು.







