ಸುಳ್ಯದ ಪ್ರತಿಭಟನೆಯ ಹಿಂದೆ ರಾಜಕೀಯ: ರೈ
ಪುತ್ತೂರು, ಸೆ.20: ಧಾರ್ಮಿಕ ಸೂಕ್ಷ್ಮ ವಿಚಾರಗಳ ಬಗ್ಗೆ ಗುಲ್ಲೆಬ್ಬಿಸಿ ರಾಜಕೀಯ ನಡೆಸುವುದು ಬಿಜೆಪಿ ಮತ್ತು ಸಂಘಪರಿವಾರದ ಚಾಳಿಯಾಗಿದ್ದು, ಸುಳ್ಯದಲ್ಲಿ ಮತಾಂತರ ನಡೆಸಲಾಗುತ್ತಿದೆ ಎಂದು ಆಪಾದಿಸಿ ಪ್ರತಿಭಟನೆ ನಡೆಸಿರುವುದು ಅವರ ‘ರಾಜಕೀಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮತಾಂತರವೂ ಸೇರಿದಂತೆ ಧಾರ್ಮಿಕ ಸೂಕ್ಷ್ಮ ವಿಚಾರಗಳ ಬಗ್ಗೆ ಬಿಜೆಪಿ ಮತ್ತು ಸಂಘ ಪರಿವಾರ ಹಿಂದಿನಿಂದಲೇ ಗುಲ್ಲೆಬ್ಬಿಸುತ್ತಿದೆ. ಕೇಂದ್ರದಲ್ಲಿ ಈಗ ಅವರದೇ ಸರಕಾರವಿದ್ದು, ಮತಾಂತರ ತಡೆಗೆ ಬೇಕಾದ ಕಾನೂನು ಮಾಡಿಕೊಳ್ಳಲಿ ಎಂದರು.
ಬಜರಂಗದಳವೂ ಸೇರಿದಂತೆ ಗೋ ರಕ್ಷಣೆ ಹೆಸರಿನಲ್ಲಿ ಕಾರ್ಯಾಚರಿಸುವವರಲ್ಲಿ ಶೇ.80 ಕ್ರಿಮಿನಲ್‌ಗಳಿದ್ದಾರೆ ಎಂದು ನಾವು ಈ ಹಿಂದೆಯೇ ಹೇಳಿದ್ದೆವು. ಇದೀಗ ಪ್ರಧಾನಿ ಮೋದಿಯೂ ಅದನ್ನೇ ಹೇಳುತ್ತಿದ್ದಾರೆ. ಪ್ರಧಾನಿಗೆ ಈಗ ಸತ್ಯದ ಅರಿವಾಗಿದೆ. ಬಜರಂಗದಳ ಸೇರಿಕೊಂಡ ಹೆಚ್ಚು ಮೂಲಭೂತವಾದಿಗಳಿಗೆ ಅಧ್ಯಕ್ಷ ಪಟ್ಟ ನೀಡುತ್ತಾರೆ, ಕಡಿಮೆ ಮೂಲಭೂತವಾದಿಗಳಿಗೆ ಉಪಾಧ್ಯಕ್ಷ ಮತ್ತಿತರ ಹುದ್ದೆ ನೀಡುತ್ತಾರೆ. ಗುಜರಾತ್‌ನಲ್ಲಿ ಗೋ ರಕ್ಷಣೆ ಹೆಸರಿನಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಸುತ್ತಾರೆ. ದಕ್ಷಿಣ ಕನ್ನಡದಲ್ಲಿ ಕಳೆದ ವರ್ಷ ಮುಸ್ಲಿಮ್ ಎಂದು ಭಾವಿಸಿಕೊಂಡು ಹರೀಶ್ ಪೂಜಾರಿ ಎಂಬ ಯುವಕನನ್ನು ಕೊಂದರು ಎಂದು ಅವರು ಆಪಾದಿಸಿದರು.
ಮೂರು ವರ್ಷಗಳಲ್ಲಿ ಸಿದ್ದರಾಮಯ್ಯ ಸರಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಮತ್ತು ಬಿಜೆಪಿ ವೈಫಲ್ಯದ ವಿರುದ್ಧ ಜಾಗೃತಿ ಮೂಡಿಸಲು ಪ್ರತೀ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಾಗಾರ ನಡೆಸಲು ನಿರ್ಧರಿಸಲಾಗಿದೆ. ಅ.12ರಂದು ಸುಳ್ಯ, 18ರಂದು ಬೆಳ್ತಂಗಡಿ, 19ರಂದು ಪುತ್ತೂರಿನಲ್ಲಿ ಕಾರ್ಯಾಗಾರ ನಡೆಸಲಾಗುವುದು ಎಂದರು.
ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷ ದಿವ್ಯಪ್ರಭಾ ಚಿಲ್ತಡ್ಕ, ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಜಿಪಂ ಸದಸ್ಯ ಎಂ.ಎಸ್. ಮುಹಮ್ಮದ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ಸುಳ್ಯ ಬ್ಲಾಕ್ ಅಧ್ಯಕ್ಷ ವೆಂಕಪ್ಪಗೌಡ, ಕಡಬ ಬ್ಲಾಕ್ ಅಶೋಕ್ ಕುಮಾರ್ ಕೆರ್ಮಾಯಿ, ಮುಖಂಡರಾದ ಕಾವು ಹೇಮನಾಥ ಶೆಟ್ಟಿ, ಸೂತ್ರಬೆಟ್ಟು ಜಗನ್ನಾಥ ರೈ, ನಿತ್ಯಾನಂದ ಮುಂಡೋಡಿ ಉಪಸ್ಥಿತರಿದ್ದರು.





