ಉರಿ ಉಗ್ರರ ದಾಳಿ: ಎರಡನೆ ಸೈನಿಕ ಪುತ್ರನನ್ನು ಕಳೆದುಕೊಂಡ ಅಂಧ ತಂದೆ

ಭೋಜಪುರ (ಬಿಹಾರ), ಸೆ.20: ಕಾಶ್ಮೀರದ ಉರಿ ಉಗ್ರರ ದಾಳಿ ಪ್ರಕರಣದಲ್ಲಿ ಅಂಧ ತಂದೆಯೊಬ್ಬರು ತನ್ನ ಎರಡನೇ ಸೈನಿಕ ಮಗನನ್ನು ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಕಳೆದ 20 ವರ್ಷಗಳಿಂದ ದೃಷ್ಟಿ ಕಳೆದುಕೊಂಡಿರುವ ಜಗನಾರಾಯಣ ಸಿಂಗ್ ಇದೀಗ ಮರಳಿ ದೃಷ್ಟಿ ಪಡೆದು ತನ್ನ ಮಗನ ಸಾವಿಗೆ ಕಾರಣರಾಗಿರುವ ಉಗ್ರರ ವಿರುದ್ಧ ಪ್ರತಿದಾಳಿ ನಡೆಸಬೇಕು ಎಂಬ ಕೋಪದಲ್ಲಿದ್ದಾರೆ.
ಭಾರತದ ಸೇನೆಯ ಜೊತೆ ಸೇರಿ ಪಾಕಿಸ್ತಾನದ ವಿರುದ್ಧ ಹೋರಾಡುವ ಶಕ್ತಿ ನನ್ನಲ್ಲಿ ಇನ್ನೂ ಇದೆ. ಭಯೋತ್ಪಾದಕರು ನಮ್ಮ ಸೈನಿಕರನ್ನು ಹೇಗೆ ಹತ್ಯೆ ಮಾಡಿದರೋ ಹಾಗೆಯೇ ಅವರನ್ನೂ ಸಾಯಿಸಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಅವರ ಮಗ ಹವಾಲ್ದಾರ್ ಅಶೋಕ್ ಕುಮಾರ್ ಸಿಂಗ್ (44) ರವಿವಾರದ ಉರಿ ದಾಳಿಯಲ್ಲಿ ಹತರಾಗಿದ್ದರು.
ಸಿಂಗ್ ಕುಟುಂಬಕ್ಕೆ ಇಂಥ ಆಘಾತ ಮೊದಲ ಸಲವಲ್ಲ. 1986ರಲ್ಲಿ ಇವರ ಹಿರಿಯ ಮಗ ಯೋಧ ಕಮ್ತಾಸಿಂಗ್ (23) ಬಿಕಾನೇರ್‌ನಲ್ಲಿ ಬಾಂಬ್‌ಸ್ಫೋಟದಲ್ಲಿ ಮೃತಪಟ್ಟಿದ್ದರು. ದೇಶರಕ್ಷಣೆಗೆ ಸಮರ್ಪಿಸಿಕೊಂಡಿರುವ ಈ ಕುಟುಂಬದಲ್ಲಿ ಅಶೋಕ್ ಸಿಂಗ್ ಮಗ ವಿಕಾಸ್‌ಸಿಂಗ್ ಇತ್ತೀಚೆಗೆ ಸೇನೆ ಸೇರಿದ್ದರು. ದನ್‌ಪುರ ಕಂಟೋನ್ಮೆಂಟ್‌ನಲ್ಲಿ ಇದೀಗ ಅವರು ಸೇವೆಯಲ್ಲಿದ್ದಾರೆ. ಅಶೋಕ್ ಅವರ ಅಜ್ಜ ರಾಜಗೃಹ ಸಿಂಗ್, ಅವರ ಇಬ್ಬರು ಮಾವಂದಿರಾದ ಶ್ಯಾಮ್ ನಾರಾಯಣ ಸಿಂಗ್ ಹಾಗೂ ರಾಮ್‌ವಿಲಾಸ್ ಸಿಂಗ್ ಅವರೂ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಇಬ್ಬರು ಅಳಿಯಂದಿರು ಕೂಡಾ ಸೇನೆಯಲ್ಲಿದ್ದಾರೆ.
ಆದರೆ ಇದೀಗ ಕುಟುಂಬದ ಸಿಟ್ಟು ಕೇಂದ್ರ ಸರಕಾರದ ಮೇಲೆ ತಿರುಗಿದ್ದು, ಭಯೋತ್ಪಾದನೆ ನಿಗ್ರಹಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶವನ್ನು ಜಗನಾರಾಯಣ ಸಿಂಗ್ ವ್ಯಕ್ತಪಡಿಸಿದ್ದಾರೆ. ಐವರು ಸೈನಿಕರ ಶಿರಚ್ಛೇದ ಮಾಡಿದ್ದಕ್ಕೆ ಪ್ರತಿಯಾಗಿ ಹತ್ತು ಉಗ್ರರ ಶಿರಚ್ಛೇದ ಮಾಡುವುದಾಗಿ ಗುಡುಗಿದ್ದು ಇದೇ ಸರಕಾರ ಎಂದು ಅವರು ಲೇವಡಿ ಮಾಡಿದ್ದಾರೆ.







