ಮತಾಂತರಕ್ಕೆ ಬಿಜೆಪಿ, ವಿಹಿಪಂ ನಾಯಕರ ಕುಮ್ಮಕ್ಕು
ಸುಳ್ಯ, ಸೆ.20: ಮತಾಂತರಕ್ಕೆ ಬಿಜೆಪಿ, ವಿಶ್ವ ಹಿಂದೂ ಪರಿಷತ್ ನಾಯಕರ ಕುಮ್ಮಕ್ಕೇ ಕಾರಣ ಎಂದು ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಆರೋಪ ಮಾಡಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಿಜೆಪಿ ನಾಯಕರು ಚುನಾವಣೆ ಬಂದಾಗ ಮಸೀದಿಗಳಿಗೆ ತೆರಳಿ ಅನುದಾನ ಘೋಷಣೆ ಮಾಡುತ್ತಾರೆ. ಮುಸ್ಲಿಮರನ್ನು ಓಲೈಸಿ ಮತಯಾಚನೆ ಮಾಡುತ್ತಾರೆ. ಬಿಜೆಪಿ ನಾಯಕ ಅಡ್ವಾಣಿಯವರ ಸೋದರ ಸೊಸೆ ಮುಸ್ಲಿಮ್. ಸುಬ್ರಹ್ಮಣ್ಯನ್ ಸ್ವಾಮಿಯ ಮಗಳು ಸುಹಾಸಿನಿ ಮುಸ್ಲಿಮ್ ಯುವಕನನ್ನು ಮದುವೆಯಾಗಿ ಸುಹಾಸಿನಿ ಹೈದರ್ ಆಗಿದ್ದಾರೆ. ಬಿಜೆಪಿಯ ರಾಷ್ಟ್ರೀಯ ವಕ್ತಾರ ನಖ್ವಿ ಮುಸ್ಲಿಮ್. ಹೀಗಿದ್ದೂ ಕಲ್ಲಡ್ಕ ಪ್ರಭಾಕರ ಭಟ್ಟರಂತವರು ಬೀದಿಯಲ್ಲಿ ಬಂದು ಮುಸ್ಲಿಮರನ್ನು ಬೈದರೆ ಏನು ಪ್ರಯೋಜನ? ಇದು ಅವರ ಡೋಂಗಿ ಹಿಂದುತ್ವವನ್ನು ತೋರಿಸುತ್ತದೆ. ಬಿಜೆಪಿಯವರು ಮೊದಲು ತಮ್ಮ ಮನೆಯಿಂದಲೇ ಮತಾಂತರವನ್ನು ತಡೆಯುವ ಕೆಲಸ ಮಾಡಲಿ ಎಂದರು. ವಿನಾಯಕ ಬಾಳಿಗರನ್ನು ಹತ್ಯೆಗೈದ ಪ್ರಧಾನ ಆರೋಪಿ ನಮೋ ಬ್ರಿಗೇಡ್ ಮುಖ್ಯಸ್ಥ. ಬಿಜೆಪಿ ನಾಯಕ ಪ್ರವೀಣ್ ಪೂಜಾರಿಯನ್ನು ಕೊಂದದ್ದು ಹಿಂದೂ ಸಂಘಟನೆಯ ಕಾರ್ಯಕರ್ತ. ಇದನ್ನೆಲ್ಲ ಮಾತನಾಡದೆ ಬೀದಿಯಲ್ಲಿ ನಿಂತು ದ್ವೇಷ ಕಾರಿದರೆ ಏನು ಫಲ ಎಂದು ಪ್ರಶ್ನಿಸಿದ ದಿವ್ಯಪ್ರಭಾ, ಬಲವಂತದ ಮತಾಂತರ ಮಾಡುವುದಕ್ಕೆ ತಮ್ಮ ವಿರೋಧವಿದೆ. ಒತ್ತಡ ಹೇರಿ ಮತಾಂತರ ಮಾಡಿದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಮತಾಂತರ ತಡೆಯಲು ಯಾವ ರಾಜಕೀಯ ಪಕ್ಷದಿಂದಲೂ ಸಾಧ್ಯವಿಲ್ಲ ಎಂದರು. ಮೆರವಣಿಗೆ, ಪ್ರತಿಭಟನೆಗಳಿಂದ ಬದಲಾವಣೆ ತರಲು ಸಾಧ್ಯವಿಲ್ಲ. ಹಿಂದುಗಳನ್ನು ಹಿಂದುಗಳೇ ಶೋಷಣೆ ಮಾಡುತ್ತಿದ್ದಾರೆ. ಚುನಾವಣೆ ಹತ್ತಿರ ಬಂದಾಗ ಪ್ರತಿಭಟನೆ ಮಾಡಿದರೆ ಜನ ಮರುಳಾಗುತ್ತಾರಾ? ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಆಲೆಟ್ಟಿ ಗ್ರಾಪಂ ಸದಸ್ಯ ಜಯಲತಾ ಅರಂಬೂರು ಉಪಸ್ಥಿತರಿದ್ದರು.





