ರಾಜ್ಯಕ್ಕೆ ಗಾಯದ ಮೇಲೆ ಬರೆ: ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ನೀರು ಬಿಡಲು ಸುಪ್ರೀಂ ಆದೇಶ
ಮೇಲುಸ್ತುವಾರಿ ಸಮಿತಿಯ ಆದೇಶವನ್ನು ತಿರಸ್ಕರಿಸಿ, ನೀರು ಬಿಡುಗಡೆ ಪ್ರಮಾಣ ದುಪ್ಪಟ್ಟುಗೊಳಿಸಿದ ನ್ಯಾಯಪೀಠ

ಕಾವೇರಿ ಜಲನಿರ್ವಹಣೆ ಮಂಡಳಿ ರಚನೆಗೆ ಕೇಂದ್ರಕ್ಕೆ ಸೂಚನೆ
ಹೊಸದಿಲ್ಲಿ, ಸೆ.20: ಕಾವೇರಿ ವಿವಾದದಲ್ಲಿ ಕರ್ನಾಟಕಕ್ಕೆ ಮಂಗಳವಾರ ಮತ್ತೆ ಹಿನ್ನಡೆಯಾಗಿದ್ದು ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ ಹಾಗೂ ಅಂತಾರಾಜ್ಯ ನದಿ ನೀರಿನ ಹಂಚಿಕೆಗಾಗಿ ನಾಲ್ಕು ವಾರಗಳೊಳಗಾಗಿ ಕಾವೇರಿ ಜಲನಿರ್ವಹಣೆ ಮಂಡಳಿಯನ್ನು ರಚಿಸುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.
ಸೆಪ್ಟಂಬರ್ 21ರಿಂದ ಸೆಪ್ಟಂಬರ್ 27ರ ಮಧ್ಯದ ಅವಧಿಯಲ್ಲಿ ಕರ್ನಾಟಕವು ತನ್ನ ಜಲಾಶಯಗಳಿಂದ 6 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆಗೊಳಿಸುವಂತೆ ನ್ಯಾಯಮೂರ್ತಿಗಳಾದ ದೀಪಕ್‌ಮಿಶ್ರಾ ಹಾಗೂ ಯು.ಯು. ಲಲಿತ್ ಅವರಿದ್ದ ದ್ವಿಸದಸ್ಯ ನ್ಯಾಯಪೀಠ ಆದೇಶಿಸಿದೆ. ಸೆ.27ರಂದು ಸುಪ್ರೀಂಕೋರ್ಟ್ ಕಾವೇರಿ ವಿವಾದದ ಮುಂದಿನ ವಿಚಾರಣೆಯನ್ನು ನಡೆಸಲಿದೆ.
ಸೆಪ್ಟಂಬರ್ 30ರವರೆಗೆ ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೊಳಿಸಬೇಕೆಂಬ ಮೇಲುಸ್ತುವಾರಿ ಸಮಿತಿ ಸೋಮವಾರ ನೀಡಿದ್ದ ತೀರ್ಪಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ರಾಜ್ಯಕ್ಕೆ ಸುಪ್ರೀಂಕೋರ್ಟ್‌ನ ಇಂದಿನ ಆದೇಶವು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕರ್ನಾಟಕದ ಪರವಾಗಿ ಹಿರಿಯ ನ್ಯಾಯವಾದಿ ಫಾಲಿ ನಾರಿಮನ್ ಅವರ ತೀವ್ರ ಆಕ್ಷೇಪದ ಹೊರತಾಗಿಯೂ ನ್ಯಾಯಪೀಠವು, ಕಾವೇರಿ ಮೇಲುಸ್ತುವಾರಿ ಸಮಿತಿಯು ಆದೇಶಿಸಿದ್ದ ನೀರು ಬಿಡುಗಡೆಯ ಪ್ರಮಾಣವನ್ನು ದುಪ್ಪಟ್ಟುಗೊಳಿಸಿದೆ. ಎರಡು ತಾಸುಗಳ ಸುದೀರ್ಘ ವಿಚಾರಣೆಯ ಬಳಿಕ ನ್ಯಾಯಪೀಠವು ಈ ಆದೇಶವನ್ನು ಹೊರಡಿಸಿತಲ್ಲದೆ, ಅಂತರ್ ರಾಜ್ಯ ಜಲ ಹಂಚಿಕೆಯ ಬಗ್ಗೆ ಕಣ್ಗಾವಲಿರಿಸಲು ಕಾವೇರಿ ನಿರ್ವಹಣೆ ಮಂಡಳಿಯನ್ನು ರಚಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿದೆ.
ವಕೀಲ ಫಾಲಿ ನಾರಿಮನ್ ಅವರು ರಾಜ್ಯದಲ್ಲಿಯೇ ಕಾವೇರಿ ನೀರಿನ ತೀವ್ರ ಕೊರತೆಯಿರುವುದರಿಂದ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ ಸಾಧ್ಯವಿಲ್ಲವೆಂದು ಹೇಳಿದರು.
ಕಾವೇರಿ ನೀರಿನ ಹಂಚಿಕೆಯ ವಿಚಾರವನ್ನು ಮೇಲುಸ್ತುವಾರಿ ಸಮಿತಿಗೆ ವಹಿಸುವಂತೆ ಅವರು ಮನವಿ ಮಾಡಿದರು. ಈ ಬಗ್ಗೆ ನ್ಯಾಯಾಲಯವು ಯಾವುದೇ ತಾತ್ಕಾಲಿಕ ಆದೇಶವನ್ನು ನೀಡಕೂಡದೆಂದು ಅವರು ಕೋರಿದರು.
ಬೆಂಗಳೂರು ನಗರಕ್ಕೆ ನೀರು ಪೂರೈಕೆನ್ನು ಕಡಿತಗೊಳಿಸಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲು ಸಾಧ್ಯವಿಲ್ಲ. ಒಂದು ವೇಳೆ ಆ ರಾಜ್ಯಕ್ಕೆ ಹೆಚ್ಚುವರಿ ನೀರು ಬಿಡುಗಡೆಗೊಳಿಸಿದ್ದೇ ಆದಲ್ಲಿ ಅದರ ಪರಿಣಾಮ ಗಂಭೀರವಾಗಲಿದೆಯೆಂದು ನಾರಿಮನ್ ತಿಳಿಸಿದರು.
ನಾರಿಮನ್ ವಾದವನ್ನು ವಿರೋಧಿಸಿದ ತಮಿಳುನಾಡು ಪರ ವಕೀಲ ಶೇಖರ್ ನಾಪಡೆ ಅವರು, ಮೇಲುಸ್ತುವಾರಿ ಸಮಿತಿಯ ಆದೇಶದಿಂದ ನಾವು ನೊಂದಿದ್ದೇವೆ ಎಂದರು. ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂಬ ಆದೇಶವನ್ನು ನೀಡುವಾಗ ಸಮಿತಿಯು ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ವರ್ಷದ ಜೂನ್, ಜುಲೈ ಹಾಗೂ ಆಗಸ್ಟ್ ನಲ್ಲಿ ತಮಿಳುನಾಡಿನಲ್ಲಿ ತೀರಾ ಕಡಿಮೆ ಮಳೆಯಾಗಿರುವುದನ್ನು ಮೇಲುಸ್ತುವಾರಿ ಸಮಿತಿಯು ಗಮನಕ್ಕೆ ತೆಗೆದುಕೊಂಡಿಲ್ಲವೆಂದು ಅವರು ತಿಳಿಸಿದರು.
ನಮಗೆ ನೀರು ಅಗತ್ಯವಾಗಿ ಬೇಕಾಗಿದೆ. ಇಲ್ಲವಾದಲ್ಲಿ ಆಗಸ್ಟ್, ಸೆಪ್ಟಂಬರ್‌ನಲ್ಲಿ ನಾಟಿ ಮಾಡಲಾಗಿರುವ ಸಾಂಬಾಬೆಳೆಗಳು ನಾಶವಾಗಲಿವೆಯೆಂದು ನಾಪಡೆ ನ್ಯಾಯಾಲಯದ ಮುಂದೆ ಕಳವಳ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ್ ಸೆಪ್ಟಂಬರ್ 5ರಂದು ನೀಡಿದ್ದ ಆದೇಶದಲ್ಲಿ ಹತ್ತು ದಿನಗಳ ಕಾಲ ತಮಿಳುನಾಡಿಗೆ 15 ಸಾವಿರ ಕ್ಸೂಸೆಕ್ ನೀರು ಬಿಡುಗಡೆಗೊಳಿಸಲು ಆದೇಶಿಸಿತ್ತು. ಆನಂತರ 12ರಂದು ತನ್ನ ಆದೇಶದಲ್ಲಿ ಮಾರ್ಪಾಡು ಮಾಡಿದ ನ್ಯಾಯಾಲಯವು ಸೆಪ್ಟಂಬರ್ 20ರವರೆಗೆ 12 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಸೂಚಿಸಿತ್ತು.
ಕಾವೇರಿ ಮೇಲುಸ್ತುವಾರಿ ಸಮಿತಿಯು ಸೋಮವಾರ ನೀಡಿದ ಮಧ್ಯಾಂತರ ಆದೇಶದಲ್ಲಿ ಸೆಪ್ಟಂಬರ್ 21ರಿಂದ ಸೆಪ್ಟಂಬರ್ 30ರ ನಡುವೆ ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಆದೇಶಿಸಿತ್ತು.
ಸುಪ್ರೀಂಕೋರ್ಟ್ ಹೇಳಿದ್ದೇನು?
ಮೇಲುಸ್ತುವಾರಿ ಸಮಿತಿಯ ಆದೇಶದಿಂದ ನೀವು (ಕರ್ನಾಟಕ) ನೊಂದಿದ್ದೀರಿ. ಅವರು (ತಮಿಳುನಾಡು) ಕೂಡಾ ನೊಂದಿದ್ದಾರೆ.ನಾವೂ ನೊಂದಿದ್ದೇವೆ. ಕಾವೇರಿ ನ್ಯಾಯಾಧಿಕರಣದ ತೀರ್ಪನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೇಂದ್ರ ಸರಕಾರವು ಈತನಕ ಜಲನಿರ್ವಹಣೆ ಮಂಡಳಿಯನ್ನು ರಚಿಸಿಲ್ಲ. ನಿಗದಿತ ಕಾಲಮಿತಿಯೊಳಗೆ ಕಾವೇರಿ ಜಲನಿರ್ವಹಣೆ ಮಂಡಳಿಯನ್ನು ರಚಿಸುವುದು ಕೇಂದ್ರ ಸರಕಾರದ ಕರ್ತವ್ಯವಾಗಿದೆ. ಅಲ್ಲಿಯತನಕ ಈ ಮಧ್ಯಾಂತರ ಏರ್ಪಾಡನ್ನು ಮಾಡಬೇಕಾಗಿದೆ.
ಎರಡೂ ರಾಜ್ಯಗಳು ಎಷ್ಟು ಸಮಯದವರೆಗೆ ಜಗಳವಾಡಲಿವೆ? 1894ರಿಂದಲೇ ಈ ವಿವಾದವು ಅಸ್ತಿತ್ವದಲ್ಲಿದೆ. ಕಾವೇರಿ ಜಲ ನಿರ್ವಹಣೆ ಮಂಡಳಿಯು ಒಂದು ತಜ್ಞ ಘಟಕವಾಗಿದ್ದು, ಅದರ ರಚನೆಯಾಗಬೇಕಿದೆ ಎಂದು ಕೇಂದ್ರ ಸರಕಾರದ ಹೆಚ್ಚುವರಿ ಅಟಾರ್ನಿ ಜನರಲ್ ವಕೀಲ ಪಿಂಕಿ ಆನಂದ್‌ಗೆ ದ್ವಿಸದಸ್ಯ ನ್ಯಾಯಪೀಠ ತಿಳಿಸಿದೆ.
ಏನಿದು ಕಾವೇರಿ ಜಲನಿರ್ವಹಣೆ ಮಂಡಳಿ?
ಸುಪ್ರೀಂಕೋರ್ಟ್ ಮಂಗಳವಾರ ನೀಡಿದ ಆದೇಶದಂತೆ ಕಾವೇರಿ ನಿರ್ವಹಣೆ ಮಂಡಳಿ ರಚನೆಯಾದಲ್ಲಿ ಮಂಡಳಿಗೆ ಅಧ್ಯಕ್ಷರು, ಸದಸ್ಯರು, ಹಾಗೂ ನೀರಾವರಿ ತಜ್ಞರನ್ನು ಕೇಂದ್ರ ಸರಕಾರವೇ ನೇಮಕಗೊಳಿಸಲಿದೆ. ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಜಲಾಶಯಗಳು ಈ ಮಂಡಳಿಯ ಅಧಿಕಾರ ವ್ಯಾಪ್ತಿಗೊಳಡುತ್ತವೆ. ಕಾವೇರಿ ನೀರಿನ ಹಂಚಿಕೆ, ಬಿಡುಗಡೆಗೆ ಸಂಬಂಧಿಸಿ ಎಲ್ಲಾ ತೀರ್ಮಾನಗಳನ್ನು ಈ ಮಂಡಳಿಯೇ ಕೈಗೊಳ್ಳಲಿದೆ. ಕರ್ನಾಟಕ,ತಮಿಳುನಾಡು,ಕೇರಳ ಹಾಗೂ ಪುದುಚೇರಿ ಸೇರಿದಂತೆ ನಾಲ್ಕು ರಾಜ್ಯಗಳ ಪ್ರತಿನಿಧಿಗಳು ಈ ಮಂಡಳಿಯ ಸದಸ್ಯರಾಗಲಿದ್ದಾರೆ.







