ಋಷಿರಾಜ್ ಬರೊಟ್‌ಗೆ ಚಿನ್ನದ ಪದಕ
ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್

ಗಬಾಲ(ಅಝರ್‌ಬೈಜಾನ್), ಸೆ.20: ಜೂನಿಯರ್ ಪುರುಷರ 25 ಮೀ. ರ್ಯಾಪಿಡ್ ಫೈಯರ್ ಪಿಸ್ತೂಲ್ ವಿಭಾಗದಲ್ಲಿ ಋಷಿರಾಜ್ ಬರೊಟ್ ಚಿನ್ನದ ಪದಕ ಜಯಿಸುವ ಮೂಲಕ ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನಲ್ಲಿ ಭಾರತೀಯ ಶೂಟರ್‌ಗಳು ಉತ್ತಮ ಪ್ರದರ್ಶನ ಮುಂದುವರಿಸಿದ್ದಾರೆ.
ಅರ್ಹತಾ ಸುತ್ತಿನಲ್ಲಿ 556 ಅಂಕ ಗಳಿಸಿ ಫೈನಲ್‌ಗೆ ತಲುಪಿದ್ದ 19ರ ಹರೆಯದ ಬರೊಟ್ ಝೆಕ್ ಗಣರಾಜ್ಯದ ಲುಕಾಸ್ ಸ್ಕೌಮಲ್‌ರನ್ನು 25-23 ಅಂತರದಿಂದ ಮಣಿಸಿ ಜೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ ಚೊಚ್ಚಲ ಪದಕ ಜಯಿಸಿದರು.
ಭಾರತ ಮಂಗಳವಾರ 1 ಚಿನ್ನ ಸಹಿತ ನಾಲ್ಕು ಪದಕಗಳನ್ನು ಜಯಿಸಿದ್ದು, ಒಟ್ಟು 6 ಚಿನ್ನ, 4 ಬೆಳ್ಳಿ ಹಾಗೂ 8 ಕಂಚಿನ ಪದಕ ಜಯಿಸಿ ಪದಕ ಪಟ್ಟಿಯಲ್ಲಿ 2ನೆ ಸ್ಥಾನಕ್ಕೇರಿದೆ.
ಪ್ರತಿಕ್ ಬೋಸ್, ಅರ್ಜುನ್ ಬಾಬುಟಾ ಹಾಗೂ ಪ್ರಶಾಂತ್ 10 ಮೀ. ಏರ್ ರೈಫಲ್‌ನ ಟೀಮ್ ವಿಭಾಗದಲ್ಲಿ 1849.9 ಅಂಕ ಗಳಿಸಿ ಚಿನ್ನ ಜಯಿಸಿದರು. ಜೂನಿಯರ್ ಪುರುಷರ 5 ಮೀ.ಪಿಸ್ತೂಲ್ ಟೀಮ್ ಸ್ಪರ್ಧೆಯಲ್ಲಿ ಅನ್ಮೋಲ್, ನಿಶಾಂತ್, ಅರ್ಜುನ್ ದಾಸ್ 1600 ಅಂಕಗಳಿಸಿ ಬೆಳ್ಳಿ ಪದಕ ಜಯಿಸಿದರು. ಜೂ. ಮಹಿಳೆಯರ 10 ಮೀ. ಏರ್ ರೈಫಲ್‌ನಲ್ಲಿ ಡಿಲ್‌ರೀನ್ ಗಿಲ್, ಗೀತಾಕ್ಷ್ಮೀ, ಆಶೀ ರಸ್ಟೊಗಿ ಭಾರತಕ್ಕೆ ಕಂಚು ಗೆದ್ದುಕೊಟ್ಟರು.







