ಕೆಪಿಎಲ್: ಬೆಳಗಾವಿಗೆ ಸುಲಭವಾಗಿ ಶರಣಾದ ಶಿವಮೊಗ್ಗ

ಹುಬ್ಬಳ್ಳಿ, ಸೆ.20: ಆಲ್‌ರೌಂಡ್ ಪ್ರದರ್ಶನ ನೀಡಿದ ಬೆಳಗಾವಿ ಪ್ಯಾಂಥರ್ಸ್ ತಂಡ ನಮ್ಮ ಶಿವಮೊಗ್ಗ ತಂಡ ವಿರುದ್ಧದ ಕೆಪಿಎಲ್ ಟ್ವೆಂಟಿ-20 ಟೂರ್ನಿಯ 8ನೆ ಪಂದ್ಯದಲ್ಲಿ 8 ವಿಕೆಟ್‌ಗಳ ಅಂತರದಿಂದ ಸುಲಭ ಜಯ ಸಾಧಿಸಿದೆ.
ಆರಂಭಿಕ ದಾಂಡಿಗ ಮಾಯಾಂಕ್ ಅಗರವಾಲ್ ಆಕರ್ಷಕ ಅರ್ಧಶತಕ(69) ಹಾಗೂ ಪ್ರವೀಣ್ ದುಬೆ(4-19) ಅಮೋಘ ಬೌಲಿಂಗ್‌ನ ಬೆಂಬಲದಿಂದ ಬೆಳಗಾವಿ ಭರ್ಜರಿ ಜಯ ದಾಖಲಿಸಿತು. ನಮ್ಮ ಶಿವಮೊಗ್ಗ ತಂಡ ಯಾವ ಹಂತದಲ್ಲೂ ಹೋರಾಟವನ್ನೇ ನೀಡದೆ ಸುಲಭವಾಗಿ ಶರಣಾಯಿತು.
ಇಲ್ಲಿನ ಕೆಎಸ್‌ಸಿಎ ಹುಬ್ಬಳ್ಳಿ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ನಮ್ಮ ಶಿವಮೊಗ್ಗ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.
ಪ್ರವೀಣ್ ದುಬೆ ಹಾಗೂ ಅಭಿಷೇಕ್ ಸಾಕುಜೆ(2-16) ದಾಳಿಗೆ ತತ್ತರಿಸಿದ ಶಿವಮೊಗ್ಗ ತಂಡ 19.5 ಓವರ್‌ಗಳಲ್ಲಿ ಕೇವಲ 125 ರನ್‌ಗೆ ಆಲೌಟಾಯಿತು. ಶಿವಮೊಗ್ಗದ ನಾಯಕ ಸ್ಟುವರ್ಟ್ ಬಿನ್ನಿ 27 ಎಸೆತಗಳಲ್ಲಿ 29 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಪವನ್ ದೇಶಪಾಂಡೆ(23), ಝೀಶಾನ್ ಅಲಿ(21) ಎರಡಂಕೆಯ ಸ್ಕೋರ್ ದಾಖಲಿಸಿದರು.
ಗೆಲ್ಲಲು ಸುಲಭ ಸವಾಲು ಪಡೆದ ಬೆಳಗಾವಿ ತಂಡ ಇನಿಂಗ್ಸ್‌ನ 2ನೆ ಓವರ್‌ನಲ್ಲಿ ಆರಂಭಿಕ ಆಟಗಾರ ಕೆ. ಅಬ್ಬಾಸ್(01) ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತು. ಆಗ 2ನೆ ವಿಕೆಟ್‌ಗೆ 81 ರನ್ ಜೊತೆಯಾಟ ನಡೆಸಿದ ಅಗರವಾಲ್ ಹಾಗೂ ನಾಯಕ ವಿನಯಕುಮಾರ್(40 ರನ್, 37 ಎಸೆತ, 4 ಬೌಂಡರಿ, 1 ಸಿಕ್ಸರ್)ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ವಿನಯ್ ಔಟಾದ ಬಳಿಕ ಶುಐಬ್ ಮ್ಯಾನೇಜರ್(ಔಟಾಗದೆ 14) ಅವರೊಂದಿಗೆ ಕೈಜೋಡಿಸಿದ ಮಾಯಾಂಕ್ 16.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
47 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಿತ 69 ರನ್ ಗಳಿಸಿದ ಮಾಯಾಂಕ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದರು. ಉತ್ತಮ ಪ್ರದರ್ಶನ ನೀಡಿದ ಬೌಲರ್ ದುಬೆ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದರು.
ಸಂಕ್ಷಿಪ್ತ ಸ್ಕೋರ್
ನಮ್ಮ ಶಿವಮೊಗ್ಗ: 19.5 ಓವರ್‌ಗಳಲ್ಲಿ 125 ರನ್‌ಗೆ ಆಲೌಟ್
(ಸ್ಟುವರ್ಟ್ ಬಿನ್ನಿ 29, ಪವನ್ ದೇಶಪಾಂಡೆ 23, ಝೀಶಾನ್ 21, ಪ್ರವೀಣ್ ದುಬೆ 4-19, ಅಭಿಷೇಕ್ 2-18)
ಬೆಳಗಾವಿ ಪ್ಯಾಂಥರ್ಸ್: 16.5 ಓವರ್‌ಗಳಲ್ಲಿ 126/2
(ಮಾಯಾಂಕ್ ಅಗರವಾಲ್ ಔಟಾಗದೆ 69, ವಿನಯಕುಮಾರ್ 40, ಎಸ್.ಗೋಪಾಲ್ 1-34)
ಪಂದ್ಯಶ್ರೇಷ್ಠ: ಪ್ರವೀಣ್ ದುಬೆ.
ಹುಬ್ಬಳ್ಳಿ ಟೈಗರ್ಸ್‌ಗೆ ಜಯ
ಹುಬ್ಬಳ್ಳಿ, ಸೆ.20: ಕೆಪಿಎಲ್ ಟ್ವೆಂಟಿ-20 ಟೂರ್ನಿಯ 9ನೆ ಪಂದ್ಯದಲ್ಲಿ ಆತಿಥೇಯ ಹುಬ್ಬಳ್ಳಿ ಟೈಗರ್ಸ್ ತಂಡ ಬಳ್ಳಾರಿ ಟಸ್ಕರ್ಸ್ ವಿರುದ್ಧ ವಿಜೆಡಿ ನಿಯಮದ ಪ್ರಕಾರ 7 ವಿಕೆಟ್‌ಗಳ ಅಂತರದ ಜಯ ದಾಖಲಿಸಿತು.
ಮಂಗಳವಾರ ಇಲ್ಲಿ ನಡೆದ ಮಳೆ ಬಾಧಿತ ಪಂದ್ಯದಲ್ಲಿ ಗೆಲುವಿಗೆ 16 ಓವರ್‌ಗಳಲ್ಲಿ 139 ರನ್ ಪರಿಷ್ಕೃತ ಗುರಿ ಪಡೆದ ಹುಬ್ಬಳ್ಳಿ ತಂಡ 14.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತು. ಆರಂಭಿಕ ದಾಂಡಿಗ ಮುಹಮ್ಮದ್ ತಾಹ(52 ರನ್, 36 ಎ.) ಸತತ 2ನೆ ಅರ್ಧಶತಕ ಬಾರಿಸಿ ತಂಡವನ್ನು ಆಧರಿಸಿದರು.
ಉತ್ತಮ ಆರಂಭ ಪಡೆದಿದ್ದ ಬಳ್ಳಾರಿ ತಂಡವನ್ನು 164 ರನ್‌ಗೆ ಕಟ್ಟಿ ಹಾಕಿದ ಬೌಲರ್ ವಿಲಿಯಮ್ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ್ದಾರೆ.
ಇದಕ್ಕೆ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಬಳ್ಳಾರಿ ತಂಡ ಆರಂಭಿಕ ಆಟಗಾರರಾದ ಆರ್‌ಪಿ ಕದಮ್(50) ಹಾಗೂ ಕೆಬಿ ಪವನ್(54) ಬಾರಿಸಿದ ಅರ್ಧಶತಕದ ಕೊಡುಗೆಯ ಸಹಾಯದಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು.
ಮೊದಲ ವಿಕೆಟ್‌ಗೆ 11 ಓವರ್‌ಗಳಲ್ಲಿ 101 ರನ್ ಜೊತೆಯಾಟ ನಡೆಸಿದ ಕದಮ್-ಪವನ್ ಜೋಡಿ ಬಳ್ಳಾರಿಗೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಆದರೆ, ಈ ಇಬ್ಬರು ಬೇರ್ಪಟ್ಟ ಬಳಿಕ ಕುಸಿತ ಕಂಡ ಬಳ್ಳಾರಿ 164 ರನ್ ಗಳಿಸಲಷ್ಟೇ ಶಕ್ತವಾಯಿತು. ಹುಬ್ಬಳ್ಳಿ ಪರ ವಿಲಿಯಮ್(3-20) ಮೂರು ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.
ಸಂಕ್ಷಿಪ್ತ ಸ್ಕೋರ್
ಬಳ್ಳಾರಿ ಟಸ್ಕರ್ಸ್: 20 ಓವರ್‌ಗಳಲ್ಲಿ 164/6
(ಕೆಬಿ ಪವನ್ 54, ಕದಮ್ 50, ವಿಲಿಯಮ್ 3-20)
ಹುಬ್ಬಳ್ಳಿ ಟೈಗರ್ಸ್: 14.5 ಓವರ್‌ಗಳಲ್ಲಿ 143/3
(ಮುಹಮ್ಮದ್ ತಾಹ 52, ವಿಲಿಯಮ್ ಔಟಾಗದೆ 28, ಕಪೂರ್ 22, ಅಮಿತ್ ವರ್ಮ 1-23)







