ಕಬಡ್ಡಿ ವಿಶ್ವಕಪ್: ಅನೂಪ್ ಕುಮಾರ್ ಭಾರತದ ನಾಯಕ

ಮುಂಬೈ, ಸೆ.20: ಹರ್ಯಾಣದ ಸ್ಟಾರ್ ರೈಡರ್ ಅನೂಪ್ ಕುಮಾರ್ ಮುಂದಿನ ತಿಂಗಳು ಅಹ್ಮದಾಬಾದ್‌ನಲ್ಲಿ ಆರಂಭವಾಗಲಿರುವ ಕಬಡ್ಡಿ ವಿಶ್ವಕಪ್‌ನಲ್ಲಿ ಭಾರತದ ಪುರುಷರ ಕಬಡ್ಡಿ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಅಕ್ಟೋಬರ್ ಏಳರಿಂದ ಆರಂಭವಾಗಲಿರುವ ವಿಶ್ವಕಪ್ ಟೂರ್ನಿಗೆ 14 ಸದಸ್ಯರನ್ನು ಒಳಗೊಂಡ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಆಲ್‌ರೌಂಡರ್ ಮಂಜೀತ್ ಚಿಲ್ಲರ್ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಲಿದ್ದು, ತಂಡಗಳನ್ನು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಲಾಯಿತು.
ಟೂರ್ನಿಯಲ್ಲಿ ಆತಿಥೇಯ ಭಾರತವಲ್ಲದೆ ಇರಾನ್, ದಕ್ಷಿಣ ಕೊರಿಯಾ, ಬಾಂಗ್ಲಾದೇಶ, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯ, ಪೊಲೆಂಡ್, ಥಾಯ್ಲೆಂಡ್, ಜಪಾನ್, ಅರ್ಜೆಂಟೀನ, ಕೀನ್ಯದ ಕಬಡ್ಡಿ ತಂಡಗಳು ಭಾಗವಹಿಸಲಿವೆ.
ಬಲ್ವಾನ್ ಸಿಂಗ್ ಮುಖ್ಯ ಕೋಚ್ ಆಗಿಯೂ, ಇ. ಭಾಸ್ಕರನ್ ಉಪ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಅಹ್ಮದಾಬಾದ್‌ನಲ್ಲಿ ನಡೆದ ತರಬೇತಿ ಶಿಬಿರ ಭಾರತೀಯ ತಂಡಕ್ಕೆ ಸರಿಯಾದ ಆಟಗಾರರನ್ನು ಆಯ್ಕೆ ಮಾಡಲು ನೆರವಾಗಿದೆ. ಮುಂಬರುವ ವಿಶ್ವಕಪ್‌ಗೆ ಸಮತೋಲಿತ ತಂಡವನ್ನು ಆಯ್ಕೆ ಮಾಡುವುದು ನಮ್ಮ ಗುರಿಯಾಗಿತ್ತು ಎಂದು ಬಲ್ವಾನ್ ತಿಳಿಸಿದ್ದಾರೆ.
ಕ್ರಿಕೆಟ್ ದಂತಕತೆ ಹಾಗೂ 1983ರ ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ ನಾಯಕ ಕಪಿಲ್‌ದೇವ್ ತಂಡದ ಜರ್ಸಿಯನ್ನು ಅನಾವರಣಗೊಳಿಸಿದರು. ಕ್ರಿಕೆಟ್ ಐಕಾನ್ ಕಪಿಲ್‌ದೇವ್ ಭಾರತ ತಂಡ ಆಸ್ಟ್ರೇಲಿಯ ನೆಲದಲ್ಲಿ ಮೊದಲ ಬಾರಿ ಸೀಮಿತ ಓವರ್ ಕ್ರಿಕೆಟ್ ಸರಣಿ ಆಡಿದ್ದಾಗ ತಾನು ಧರಿಸಿದ್ದ ಹಸ್ತಾಕ್ಷರವಿರುವ ಬಣ್ಣದ ಟೀ-ಶರ್ಟ್‌ನ್ನು ಅನೂಪ್‌ಗೆ ಉಡುಗೊರೆಯಾಗಿ ನೀಡಿದರು.
ಭಾರತದ ಕಬಡ್ಡಿ ತಂಡ:
ಅನೂಪ್ ಕುಮಾರ್(ನಾಯಕ), ಅಜಯ್ ಠಾಕೂರ್, ದೀಪಕ್ ಹೂಡ, ಧರ್ಮರಾಜ್, ಜಸ್ವಿರ್ ಸಿಂಗ್, ಕಿರಣ್ ಪಾರ್ಮರ್, ಮಂಜೀತ್ ಚಿಲ್ಲರ್(ಉಪನಾಯಕ), ಮೋಹಿತ್ ಚಿಲ್ಲರ್, ನಿತಿನ್ ಥೊಮರ್, ಪ್ರದೀಪ್ ನರ್ವಾಲ್, ರಾಹುಲ್ ಚೌಧರಿ, ಸಂದೀಪ್ ನರ್ವಾಲ್, ಸುರೇಂದರ್ ನಾಡಾ, ಸುರ್ಜೀತ್.







