ಉರಿಯಲ್ಲಿ ಸೇನೆಯೊಂದಿಗೆ ಗುಂಡಿನ ಕಾಳಗದಲ್ಲಿ ಎಂಟು ಭಯೋತ್ಪಾದಕರ ಹತ್ಯೆ
ಶ್ರೀನಗರ, ಸೆ.20: ಎರಡು ದಿನಗಳ ಹಿಂದೆ ಭಯೋತ್ಪಾದಕ ದಾಳಿಯಲ್ಲಿ 18 ಯೋಧರು ಬಲಿಯಾದ ಜಮ್ಮು-ಕಾಶ್ಮೀರದ ಉರಿಯಲ್ಲಿ ಮಂಗಳವಾರ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಎಂಟು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಕೊಂದಿವೆ. ಭಾರೀ ನುಸುಳುವಿಕೆ ಪ್ರಯತ್ನವೊಂದನ್ನು ವಿಫಲಗೊಳಿಸಲಾಗಿದೆ. ಕಾಶ್ಮೀರದ ಲಚಿಪುರಾದಲ್ಲಿ ಗಡಿಯಲ್ಲಿ 15 ಭಯೋತ್ಪಾದಕರ ಗುಂಪನ್ನು ತಡೆಯಲಾಗಿದೆ. ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ಮುಂದುವರಿದಿದೆ ಎಂದು ಸೇನಾ ಮೂಲಗಳು ತಿಳಿಸಿದವು.
ಇಂದು ಬೆಳಗ್ಗೆ ಕದನ ವಿರಾಮವನ್ನು ಉಲ್ಲಂಘಿಸಿದ ಪಾಕಿಸ್ತಾನ ಸೇನೆಯು ಉರಿಯಲ್ಲಿ ಭಾರತೀಯ ನೆಲೆಗಳತ್ತ ಸುಮಾರು 20 ನಿಮಿಷಗಳ ಕಾಲ ಯದ್ವಾತದ್ವಾ ಗುಂಡಿನ ಮಳೆಗೆರೆದಿತ್ತು. ಗಡಿಯಲ್ಲಿ ನುಸುಳುತ್ತಿದ್ದ ಭಯೋತ್ಪಾದಕರಿಗೆ ರಕ್ಷಣೆ ಒದಗಿಸಲು ಈ ಅಪ್ರಚೋದಿತ ದಾಳಿಯನ್ನು ನಡೆಸಲಾಗಿತ್ತು ಎನ್ನಲಾಗಿದೆ.
ಇಂದು ಭಯೋತ್ಪಾದಕರು ಒಳ ನುಸುಳಲು ಯತ್ನಿಸಿದ್ದ ದಟ್ಟಾರಣ್ಯದಲ್ಲಿ ಸೇನೆಯು ಕಟ್ಟೆಚ್ಚರವನ್ನು ವಹಿಸಿದೆ. ಹೊಸದಾಗಿ ನಡೆಯುತ್ತಿರುವ ನುಸುಳುವಿಕೆ ಪ್ರಯತ್ನಗಳು ಎಂದಿಗಿಂತಲೂ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಗಡಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುವ ಲಕ್ಷಣಗಳು ಕಂಡು ಬರುತ್ತಿವೆ.





