ಕಾವೇರಿ ವಿವಾದ: ಮಹತ್ವದ ಸರ್ವಪಕ್ಷ ಸಭೆಗೆ ಬಿಜೆಪಿ ಬಹಿಷ್ಕಾರ!

ಬೆಂಗಳೂರು, ಸೆ.21: ಸುಪ್ರೀಂಕೋರ್ಟ್ ತೀರ್ಪಿನಂತೆ ಮತ್ತೆ 7 ದಿನಗಳ ಕಾಲ ಪ್ರತಿನಿತ್ಯ ಆರು ಸಾವಿರ ಕ್ಯೂಸೆಕ್ ನೀರು ಬಿಡಬೇಕೇ, ಬೇಡವೆ ಎಂಬ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲು ಸಿಎಂ ಸಿದ್ಧರಾಮಯ್ಯ ಬುಧವಾರ ಕರೆದಿದ್ದ ಅತ್ಯಂತ ನಿರ್ಣಾಯಕ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸದೇ ಇರಲು ಬಿಜೆಪಿ ನಿರ್ಧರಿಸಿದೆ.
‘‘ಈ ಹಿಂದೆ ನಡೆದ ಸರ್ವಪಕ್ಷ ಸಭೆಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಡಬೇಡಿ ಎಂದು ನಾವು ಸಲಹೆ ನೀಡಿದ್ದೆವು. ಆದರೆ, ನಮ್ಮ ಮಾತಿಗೆ ಬೆಲೆ ಕೊಡದೆ ಕಾವೇರಿ ನೀರನ್ನು ಬಿಡುಗಡೆ ಮಾಡಲಾಗಿತ್ತು. ಆದ್ದರಿಂದ ಇಂದು ನಡೆಯುವ ಸರ್ವಪಕ್ಷ ಸಭೆಗೆ ನಾವು ಭಾಗವಹಿಸುವುದಿಲ್ಲ. ಸರಕಾರ ತನ್ನ ಬೇಜವಾಬ್ದಾರಿ ವರ್ತನೆಯಿಂದ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ. ಸರಕಾರ ತಕ್ಷಣ ವಿಧಾನ ಮಂಡಲ ಅಧಿವೇಶನ ಕರೆದು ಚರ್ಚೆ ನಡೆಸಲಿ’’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಮಂಗಳವಾರ ಸುಪ್ರೀಂ ತೀರ್ಪು ನೀಡಿದ ಬಳಿಕ ಬಿಎಸ್‌ವೈ ಅವರೊಂದಿಗೆ ಚರ್ಚೆ ನಡೆಸಿದ್ದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಇಂದು ದಿಲ್ಲಿಗೆ ತೆರಳಿದ್ದಾರೆ.
ಇಂದು ನಡೆಯಲಿರುವ ವಿಪಕ್ಷಗಳ ಸಭೆಗೆ ಭಾಗವಹಿಸುವುದಾಗಿ ಜೆಡಿಎಸ್ ಈಗಾಗಲೇ ಸ್ಪಷ್ಟಪಡಿಸಿದೆ.





