ಉಚ್ಚಿಲ: ಆಟೊಗೆ ಬಸ್ ಢಿಕ್ಕಿ; ಆಟೊಚಾಲಕ ಮೃತ್ಯು

ಪಡುಬಿದ್ರೆ, ಸೆ.21: ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದ ಆಟೊರಿಕ್ಷಾವೊಂದು ಒಳರಸ್ತೆಯಿಂದ ಬರುತ್ತಿದ್ದ ದ್ವಿಚಕ್ರವಾಹನಕ್ಕೆ ಢಿಕ್ಕಿ ಹೊಡೆದು, ಬಳಿಕ ಎದುರಿನಿಂದ ಬರುತ್ತಿದ್ದ ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಉಚ್ಚಿಲದ ಮಹಾಲಕ್ಷ್ಮಿ ದೇವಳದ ಮುಂಭಾಗ ಸಂಭವಿಸಿದೆ.
ಮೃತಪಟ್ಟ ರಿಕ್ಷಾ ಚಾಲಕನನ್ನು ಎರ್ಮಾಳು ನಿವಾಸಿ ಧನು(50) ಎಂದು ಗುರುತಿಸಲಾಗಿದೆ.
ಉಚ್ಚಿಲದ ಬಳಿ ಹೆದ್ದಾರಿಗೆ ಸರ್ವಿಸ್ ರಸ್ತೆ ಇಲ್ಲ ಎಂಬ ಕಾರಣಕ್ಕೆ ಚಾಲಕ ಧನು ಆಟೊವನ್ನು ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬರುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಆಟೊರಿಕ್ಷಾ ದ್ವಿಚಕ್ರ ವಾಹನವೊಂದಕ್ಕೆ ಢಿಕ್ಕಿ ಹೊಡೆದು ಬಳಿಕ ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್ ಗೆ ಢಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ರಿಕ್ಷಾ ಚಾಲಕನನ್ನು ಆಂಬುಲೆನ್ಸ್ ಸಿಗದ ಕಾರಣ ಆಟೋ ರಿಕ್ಷಾದಲ್ಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಚಾಲಕ ಧನು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವರದಿ: ಮೂಸಾಕಲೀಂ





