ಕಾಸರಗೋಡು: ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ ಪಿಲಿಕುಂಜೆ ಪಾರ್ಕ್
.jpg)
ಕಾಸರಗೋಡು, ಸೆ.21: ಕಾಸರಗೋಡು ನಗರಸಭೆ ಸಮೀಪದ ಪಿಲಿಕುಂಜೆಯಲ್ಲಿನ ಪಾರ್ಕ್ ಅವನತಿಯತ್ತ ಸಾಗುತ್ತಿದೆ. ಲಕ್ಷಾ೦ತರ ರೂ. ವೆಚ್ಚದಲ್ಲಿ ನಿರ್ಮಿಸಿದ ಪಾರ್ಕ್ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಮದ್ಯ ಗಾಂಜಾ ಮಾರಾಟ ಹಾಗೂ ಸೇವನೆಯ ಅಡ್ಡೆಯಾಗಿ ಪರಿಣಮಿಸಿದೆ.
ಕಾಸರಗೋಡು ನಗರಸಭೆಯಿಂದ ೧೦೦ ಮೀಟರ್ ದೂರದಲ್ಲಿ, ಸರಕಾರಿ ಅತಿಥಿಗೃಹ, ನಗರ ಸಭಾಂಗಣ ಹೀಗೆ ಹಲವು ಕೇಂದ್ರಗಳ ನಡುವೆ ಈ ಪಾರ್ಕ್ ಕಾರ್ಯಾಚರಿಸುತ್ತಿದ್ದು, ಪೊದೆ ಕಾಡುಗಳಿಂದ ತುಂಬಿದೆ. ಪಾರ್ಕ್ ನೊಳಗೆ ಹಾಗೂ ಪಾರ್ಕ್ ಪರಿಸರದ ವಿದ್ಯುತ್ ದೀಪಗಳು ಉರಿಯುತ್ತಿಲ್ಲ. ದೀಪಗಳು ಮುರಿದು ಬಿದ್ದಿವೆ. ಹಾವುಗಳು ಸೇರಿದಂತೆ ಜೀವ ಜಂತುಗಳ ನೆಲೆಯಾಗಿ ಈ ಪಾರ್ಕ್ ಈಗ ರೂಪಾಂತರಗೊಂಡಿದೆ.
ಕೆಲ ವರ್ಷಗಳ ಹಿಂದೆ ನಗರ ಪರಿಸರದವರು ಬೆಳಗ್ಗೆ ಹಾಗೂ ಸಂಜೆ ವಿಹರಿಸುವ ಕೇಂದ್ರ ಇದಾಗಿತ್ತು. ನೂರಾರು ಮಂದಿ ಇಲ್ಲಿಗೆ ಆಗಮಿಸುತ್ತಿದ್ದರು. ಆದರೆ ಇದೀಗ ನಿರ್ವಹಣೆಯ ಕೊರತೆಯಿಂದಾಗಿ ಪಾಳುಬಿದ್ದಿರುವ ಪಾರ್ಕ್ ಗೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ.
ನಗರಸಭೆಯ ವ್ಯಾಪ್ತಿಯಲ್ಲಿ ತೆರುವತ್, ತಳಂಗರೆ, ರೈಲ್ವೆ ನಿಲ್ದಾಣ ಪಕ್ಕದ ಸಿವ್ಯೂ ಪಾರ್ಕ್ , ಲೈಟ್ ಹೌಸ್, ಮೆಡೋನಾ ಮೊದಲಾದ ಕಡೆಗಳಲ್ಲೂ ಪಾರ್ಕ್ ಗಳಿವೆ. ಈ ಪಾರ್ಕ್ ಗಳತ್ತವೂ ಗಮನ ಹರಿಸಿಲ್ಲ. ಜನರಿಗಾಗಿ ನಿರ್ಮಿಸಿದ ಉದ್ಯಾನವನಗಳು ಇಂದು ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾಶದತ್ತ ಸಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.







