ಕರ್ನಾಟಕ ಪ್ರತ್ಯೇಕ ರಾಷ್ಟ್ರವಾಗಲಿ: ಚಂಪಾ

ಬೆಂಗಳೂರು, ಸೆ.21: ಸುಪ್ರೀಂ ಕೋರ್ಟ್ ಪದೇ ಪದೇ ರಾಜ್ಯಕ್ಕೆ ವಿರುದ್ಧವಾದ ತೀರ್ಪನ್ನೇ ನೀಡುತ್ತಿದೆ. ಹಾಗೂ ರಾಜ್ಯದ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದರೂ ಪ್ರಧಾನಿ ನರೇಂದ್ರ ಮೋದಿ ವೌನ ವಹಿಸಿದ್ದಾರೆ. ಇವೆಲ್ಲವನ್ನು ನೋಡಿದರೆ ರಾಷ್ಟ್ರದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಯಾವಾಗಲೂ ಅನ್ಯಾಯವೆ ಆಗುತ್ತಿದೆ. ಹೀಗಾಗಿ ಕರ್ನಾಟಕ ಒಕ್ಕೂಟ ವ್ಯವಸ್ಥೆಯಿಂದ ಹೊರಗುಳಿದ ಪ್ರತ್ಯೇಕ ರಾಷ್ಟ್ರವಾಗುವುದರತ್ತ ಚಿಂತಿಸಲಿ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಹೇಳಿದರು.
ಕಾವೇರಿ ನದಿ ನೀರು ಹಂಚಿಕೆ ಬಿಕ್ಕಟ್ಟು ಕುರಿತಂತೆ ಮುಖ್ಯಮಂತ್ರಿಗಳು ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಖ್ಯಾತ ಸಾಹಿತಿ ಚಂದ್ರಶೇಖರ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಕಾವೇರಿ ಬಿಕ್ಕಟ್ಟು ಕುರಿತಂತೆ ರಾಜ್ಯ ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಾಹಿತಿಗಳ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹಿರಿಯ ವಕೀಲ ಬಿ.ವಿ. ಆಚಾರ್ಯ ಅವರು ಹೇಳಿದಂತೆ ಇದು ಸುಪ್ರೀಂ ವ್ಯಾಪ್ತಿಗೆ ಬರುವುದಿಲ್ಲ. ಈ ವಿವಾದವನ್ನು ರಾಜ್ಯ ರಾಜ್ಯಗಳು ಸೇರಿ ಬಗೆಹರಿಸಿಕೊಳ್ಳಬೇಕು ಎನ್ನುವುದು ಇಲ್ಲಿ ಸ್ಪಷ್ಟ. ಹೀಗಾಗಿ ಮುಖ್ಯಮಂತ್ರಿಗಳು ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು. ನಾವು ಎಲ್ಲಾ ಬಗೆಯ ಹೋರಾಟಕ್ಕೂ ಸಿದ್ಧ ಎಂದು ಅವರು ಹೇಳಿದರು.
ಸಾಹಿತಿ ಮರುಳಸಿದ್ದಪ್ಪ ಮಾತನಾಡಿ,ಈ ವಿಚಾರದಲ್ಲಿ ಯಾವುದೋ ಪಿತೂರಿ ಮಾಡಿದಂತಿದೆ. ರಾಜಕಾರಣಿಗಳು ಈ ವಿಚಾರದಲ್ಲೂ ರಾಜಕರಣ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಗಲೂರು ಪ್ರಸಾದ್ ಮಾತನಾಡಿ, ಮಹಾದಾಯಿಯಲ್ಲಿ ಒಂದೆಡೆ ಅನ್ಯಾಯವಾಗಿದ್ದರೆ ಈಗ ಕಾವೇರಿ ವಿಷಯದಲ್ಲೂ ಅನ್ಯಾಯವಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.
ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಸರಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.ಕಾವೇರಿ ವಿವಾದ ಸಂಬಂಧ ಕಠಿಣ ಕ್ರಮ ಜಾರಿಗೆ ತರಬೇಕೆಂದು ಹೇಳಿದರು.
ಸಾಹಿತಿ ಗಿರೀಶ್ ಕಾರ್ನಾಡ್ ಸೇರಿದಂತೆ ಹಲವಾರು ಖ್ಯಾತ ಸಾಹಿತಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.







