ಮರುಭೂಮಿಯಲ್ಲಿ ಹಾಳಾದ ಕಾರಿನಿಂದ ಬೈಕ್ ನಿರ್ಮಿಸಿ ಪಾರಾದ!

1993ರಲ್ಲಿ ವೃತ್ತಿಯಲ್ಲಿ ಇಲೆಕ್ಟ್ರಿಶಿಯನ್ ಆಗಿದ್ದ 43 ವರ್ಷದ ಫ್ರೆಂಚ್ ವ್ಯಕ್ತಿ ಎಮಿಲ್ ಲಿರೇ ತನ್ನ ಸಿಟ್ರೋನ್ 2ಸಿವಿ ಕಾರಿನಲ್ಲಿ ಸಾಹಸ ಪ್ರಯಾಣಕ್ಕೆ ನಿರ್ಧರಿಸಿದ. ಈಜಿಪ್ಟ್‌ನ ಟಂಟಾ ನಗರದಿಂದ ಮೊರಕ್ಕೋದ ಮರುಭೂಮಿ ಮೂಲಕ ತನ್ನ ಸಿಟ್ರೋನ್‌ನಲ್ಲಿ ಸಾಗುವುದು ಆತನ ಉದ್ದೇಶವಾಗಿತ್ತು. ಆದರೆ ಪ್ರಯಾಣದ ಮಧ್ಯದಲ್ಲಿ ಮರುಭೂಮಿಯಲ್ಲಿ ಸಾಗುತ್ತಿದ್ದಾಗ ಎಮಿಲ್ ಕಾರು ಕೆಟ್ಟು ಹೋಗಿ ಮುರಿದ ಕಾರಿನ ಜೊತೆಗೆ ಏಕಾಂಗಿಯಾಗಿ ನಿಲ್ಲಬೇಕಾಗಿ ಬಂದಿತ್ತು.
ಸಹಾಯಕ್ಕೆ ಸುತ್ತಮುತ್ತ ನೂರಾರು ಮೈಲಿಗಳಷ್ಟು ದೂರದಲ್ಲಿ ಯಾರೂ ಇರಲಿಲ್ಲ. ಸಂಪರ್ಕ ಸ್ಥಾಪಿಸುವ ಸಾಧನಗಳೂ ಇಲ್ಲದೆ ಮೊರಕ್ಕೋದ ಮರಳುಗಳ ಮೇಲೆ ಸೂರ್ಯನ ಶಾಖವನ್ನು ಎದುರಿಸಿ ಏಕಾಂಗಿಯಾಗಿದ್ದ ಎಮಿಲ್ ಪಾರಾಗಲು ಯೋಚಿಸಲೇ ಸಾಧ್ಯವಿಲ್ಲದ ವ್ಯೆಹ ರಚಿಸಿದ. ತನ್ನ ಮುರಿದು ಹೋದ ಸಿಟ್ರೋನ್ ಕಾರಿನಿಂದಲೇ ತಾತ್ಕಾಲಿಕ ಮೋಟಾರ್‌ಸೈಕಲನ್ನು ತಯಾರಿಸಿದ. ಪವರ್ ಟೂಲ್ಸ್, ಡ್ರಿಲ್ ಗಳು, ಬ್ಲೋ ಟಾರ್ಕ್‌ಗಳು ಅಥವಾ ವೆಲ್ಡಿಂಗ್ ಸಾಧನಗಳು ಯಾವುದು ಇಲ್ಲದೆ ಬೇಸಿಕ್ ಟೂಲ್‌ಗಳನ್ನಷ್ಟೇ ಬಳಸಿಕೊಂಡು ಎಮಿಲ್ ತನ್ನ ಅದ್ಭುತ ಪಾರಾಗುವ ಸಾಧನ ಸಿದ್ಧ ಮಾಡಿದ. ತ್ಯಾಜ್ಯವಾಗಿದ್ದ ಕಾರು ಭಾಗಗಳನ್ನೇ ಜೋಡಿಸಿದ ಬೈಕ್ ಸಿದ್ಧವಾಯಿತು. ತಮ್ಮ ಮುರಿದ ಕಾರನ್ನು ಮೋಟಾರ್ ಸೈಕಲ್ ಆಗಿ ಬದಲಿಸಲು ಸ್ವತಃ ಮೂರು ದಿನಗಳೆಂದು ಎಮಿಲ್ ನಿಯೋಜಿಸಿದರು. ತನ್ನ ಬಳಿಯಿದ್ದ ಆಹಾರ ಸಾಮಗ್ರಿಗಳು ಮತ್ತು ನೀರು ಹತ್ತು ದಿನಗಳಿಗೆ ಸಾಲುವಂತೆ ಮಿತವಾಗಿ ಬಳಸಲು ನಿರ್ಧರಿಸಿದರು. ಯೋಜನೆ ಸಿದ್ಧವಾದ ಮೇಲೆ ಎಲ್ಲಾ ಭೌತಿಕ/ಯಾಂತ್ರಿಕ ಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಎಮಿಲ್ ಡಿಐವೈ ಮೋಟಾರ್ ಸೈಕಲ್ ನಿರ್ಮಿಸಲು ಸಿದ್ಧರಾದರು. ಮೊದಲಿಗೆ ಸಿಟ್ರೋನ್‌ನ್ನು ಬೇರ್ಪಡಿಸಿದರು. ಬಾಡಿ ಶೆಲ್ ಅನ್ನೇ ಬಿಸಿಲು ಮತ್ತು ಮರುಭೂಮಿಯ ಬಿರುಗಾಳಿಯಿಂದ ತಪ್ಪಿಸಿಕೊಳ್ಳಲು ಬಳಸಿದರು. ಮೈಯಲ್ಲಿ ಒಂದು ಅರಿವೆಯೂ ಇಲ್ಲದೆ ಎಮಿಲ್ ನಿಧಾನವಾಗಿ ತನ್ನದೇ ದ್ವಿಚಕ್ರವಾಹನವನ್ನು ಮರುಭೂಮಿಯಿಂದ ಪಾರಾಗಲು ಸಿದ್ಧಮಾಡಿದರು.
ಅವರ ಚತುರ ಇಂಜಿನಿಯರಿಂಗ್ ಕಲೆ ಕಾರಿನ ರೇರ್ ಬಂಪರನ್ನು ರುಡಿಮೆಂಟರಿ ಸೀಟ್ ಆಗಿ ಪರಿವರ್ತಿಸಿತು. ಚಾಸಿ ಸಣ್ಣದು ಮಾಡಿದರು ಮತ್ತು ಇಂಜಿನ್ ಮತ್ತು ಟ್ರಾನ್ಸ್‌ಮಿಶನನ್ನು ಮಧ್ಯದಲ್ಲಿಟ್ಟು ನಾಗರಿಕತೆಯನ್ನು ತಲುಪಲು ಸಾಧ್ಯವಾಗುವಂತಹ ವಾಹನ ಸೃಷ್ಟಿಸಿಕೊಂಡರು. ಆದರೆ ರೇರ್ ವೀಲ್ ಫ್ರಿಕ್ಷನ್ ಅನ್ನು ಚಲಾಯಿಸುವ ಒಂದು ಡ್ರಮ್ ವಿಧದ ವ್ಯವಸ್ಥೆಯಾದ ಸಿಟ್ರೋನ್‌ನ ಟ್ರಾನ್ಸ್‌ಮಿಶನ್‌ನಿಂದಾಗಿ ಭೌತಶಾಸ್ತ್ರದ ಮತ್ತು ಮೆಕಾನಿಕ್ಸ್ ನಿಯಮಗಳ ಪ್ರಕಾರ ಎಮಿಲ್ ರಿವರ್ಸ್‌ನಲ್ಲಿ ಮೋಟಾರ್ ಸೈಕಲ್‌ನ್ನು ಓಡಿಸಬೇಕಾಯಿತು.
ಒಟ್ಟಾರೆ ಬೈಕ್ ನಿರ್ಮಾಣಕ್ಕೆ ಅವರಿಗೆ 12 ದಿನಗಳು ಹಿಡಿದವು. ಕೊನೆಗೆ ಕುಡಿಯಲು ಅರ್ಧ ಲೀಟರ್ ಮಾತ್ರ ನೀರು ಇದ್ದಾಗ ಅವರು ಮೋಟಾರ್‌ಸೈಕಲ್ ಸ್ಟಾರ್ಟ್ ಮಾಡಿ ಮರುಭೂಮಿಯಿಂದ ಹೊರಗಿನ ತಮ್ಮ ಪ್ರಯಾಣವನ್ನು ಆರಂಭಿಸಿದರು. ಇಡೀ ದಿನ ಚಾಲನೆ ಮಾಡಿದ ಮೇಲೆ ಎಮಿಲ್‌ನನ್ನು ಮೊರಕ್ಕೋದ ಪೊಲೀಸ್ ಪಡೆ ಕಂಡುಹಿಡಿದು ಸಮೀಪದ ಗ್ರಾಮಕ್ಕೆ ಕೊಂಡೊಯ್ದರು. ಹೀಗೆ ನಾಟಕೀಯವಾದ ಪಲಾಯನ ಸುಖಾಂತ್ಯವಾಯಿತು. ಆದರೆ ಪೊಲೀಸರು ಅವರ ಮೇಲೆ ದೊಡ್ಡ ದಂಡವನ್ನೇ ವಿಧಿಸಿದರು. ಅವರು ನೋಂದಣಿ ಮಾಡಿಕೊಂಡಿದ್ದ ವಾಹನದ ದಾಖಲೆಗಳು ಅವರು ಚಲಾಯಿಸುತ್ತಿದ್ದ ವಸ್ತುವಿಗೆ ಹೋಲಿಕೆಯೇ ಆಗದಿದ್ದದ್ದು ಇದಕ್ಕೆ ಕಾರಣ!
ಎಮಿಲ್ ಅವರ ಈ ಅದ್ಭುತ ಪ್ರಯಾಣದ ವಿವರಗಳು ಫ್ರೆಂಚ್ ಟೆಲಿವಿಜನ್‌ನಲ್ಲಿ ಸಂಕ್ಷಿಪ್ತವಾಗಿ ಮತ್ತು 93ರ ದಿನಪತ್ರಿಕೆಗಳಲ್ಲಿ ಬಂದಿತ್ತು. ಆದರೆ ಅವರ ಈ ಅದ್ಭುತ ಪ್ರಯಾಣದ ವಿವರಗಳು ಮೋಟರಿಂಗ್ ವೆಬ್‌ತಾಣದಲ್ಲಿ ಪ್ರಕಟವಾದ ಕಾರಣ ಅವರು ಈಗ ಮತ್ತೆ ಸುದ್ದಿಯಾದರು. ಎಮಿಲ್ ಲೆರೇ ಅವರಿಗೆ ಈಗ 60 ವರ್ಷ ವಯಸ್ಸಾಗಿದ್ದು, ಈಶಾನ್ಯ ಫ್ರಾನ್ಸ್‌ನಲ್ಲಿ ನೆಲೆಸಿದ್ದಾರೆ. ಮೊರಕ್ಕೋದ ಮರುಭೂಮಿಯಿಂದ ಅದ್ಭುತವಾಗಿ ಪಾರಾದ ನೆನಪಿಗಾಗಿ ಇಂದಿಗೂ ಅವರು ತಮ್ಮ ಮೋಟಾರ್ ಸೈಕಲನ್ನು ಇಟ್ಟುಕೊಂಡಿದ್ದಾರೆ. ಅವರ ಈ ಸಾಧನೆ ಅವರಿಗೆ ವಿಶ್ವದ ಅತೀ ಅದ್ಭುತ ಮೆಕ್ಯಾನಿಕ್ ಎನ್ನುವ ಹಿರಿಮೆ ಗಳಿಸಿಕೊಟ್ಟಿದೆ. ಈ ಹಿರಿಮೆಗೆ ಖಂಡಿತಾ ಅವರು ಅರ್ಹರು.
ಕೃಪೆ: http://www.motoroids.com/







