ಈ ಪಂಜಾಬಿ ಆಂಟಿಯ ಧೈರ್ಯಕ್ಕೆ ಸಾಟಿ ಯಾರು?
ಕಳ್ಳನೇ ಈಕೆಗೆ ಹೆದರಿ ಕಾಲಿಗೆ ಬುದ್ಧಿ ಹೇಳಿದ್ದು ಹೇಗೆ ನೋಡಿ!

ಲಂಡನ್, ಸೆ.21: ಇದು ಬ್ರಿಟನ್‌ನ ಹಲ್ ಎಂಬಲ್ಲಿ ನೆಲೆಸಿದ ಪಂಜಾಬಿ ಆಂಟಿಯ ಸಾಹಸಗಾಥೆ. ಕರಮ್‌ಜೀತ್ ಸಂಘಾ (49) ಎಂಬ ಈ ಧೀರ ಮಹಿಳೆಯ ಮನೆಯಲ್ಲಿ ದಿಢೀರನೇ ಪ್ರತ್ಯಕ್ಷನಾದ ಡಕಾಯಿತನೊಬ್ಬ ಏಳು ಇಂಚಿನ ಚಾಕು ತೋರಿಸಿ, ಎಲ್ಲ ಹಣ ನೀಡುವಂತೆ ಬೆದರಿಸಿದ. ಆದರೆ ಆಕೆ ಹಣ ನೀಡದಿದ್ದುದು ಮಾತ್ರವಲ್ಲದೇ, ಕಳ್ಳನೇ ಭೀತಿಯಿಂದ ಕಾಲಿಗೆ ಬುದ್ಧಿಹೇಳುವಂತೆ ಮಾಡಿದ ಬಗೆ ಹೇಗೆ ಗೊತ್ತೇ?
ಸಂಘಾ ತಮ್ಮ ಅಂಗಡಿಯಲ್ಲಿ ಚಹಾ ಸೇವಿಸುತ್ತಿದ್ದಾಗ ಆಕೆಯನ್ನು ಭಯಪಡಿಸಲು ಬಂದಿದ್ದ ಡಕಾಯಿತ ಸ್ಟುವರ್ಟ್ ಗ್ಲೀಸನ್‌ಗೆ, ಪೂರ್ಣವಾಗಿ ಚಹಾ ಸೇವಿಸುವವರೆಗೂ ಕಾಯುವಂತೆ ವಿನಂತಿಸಿದರು. ಬಳಿಕ ಆ ಧೀರ ಮಹಿಳೆ ಏನು ಮಾಡಿದರು ಎನ್ನುವುದನ್ನು ಅವರ ಮಾತಿನಲ್ಲೇ ಕೇಳಿ.
"ನಾನು ಚಹಾ ಸೇವಿಸುತ್ತಿದ್ದಾಗ ಡಕಾಯಿತ ಏಳಿಂಚಿನ ದೊಡ್ಡ ಚಾಕಿನೊಂದಿಗೆ ಆಗಮಿಸಿದ. ಎಲ್ಲ ಹಣ ನೀಡುವಂತೆ ಆತ ಆಗ್ರಹಿಸಿದಾಗ, ನಾನು ಅಧೀರಳಾಗದೇ, ಆರಾಮವಾಗಿಯೇ ಇದ್ದೆ. ನಾನು ಚಹಾ ಸೇವಿಸುತ್ತಿದ್ದೇನೆ ಎಂದಾಗ, ಅದನ್ನು ಪಕ್ಕಕ್ಕಿಟ್ಟು ಮೊದಲು ಹಣ ನೀಡು ಎಂದು ಒತ್ತಾಯಿಸಿದ. ಸರಿ ಎಂದು ನಾನು ಹೇಳಿದೆ. ತಕ್ಷಣ ಕುಶಲಕಲೆಗೆ ಬಳಸುವ ಚಾಕನ್ನು ಝಳಪಿಸಿದೆ. ನಾನು ಆತನಿಗೆ ಯಾವುದೇ ಘಾಸಿ ಮಾಡುವ ಮುನ್ನವೇ ಆತ ಭಯದಿಂದ ತತ್ತರಿಸಿದ. ಥರಥರನೇ ನಡುಗಿ ಕಾಲಿಗೆ ಬುದ್ದಿ ಹೇಳಿದ" ಎಂದು ಮಹಿಳೆಯ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ಘಟನೆ ಮೇ 26ರಂದೇ ನಡೆದಿದ್ದು, ಆರೋಪಿಗೆ ಈಗ ಡಕಾಯಿತಿ ಹಾಗೂ ಅಕ್ರಮವಾಗಿ ಚಾಕು ಹೊಂದಿದ ಆರೋಪದ ಮೇರೆಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.







