ಮದೀನಾಕ್ಕೆ ಹಾಜಿಗಳಿಂದ ಕಣ್ಣೀರ ವಿದಾಯ

ಮದೀನಾ, ಸೆ.21: ಪ್ರವಾದಿ ಮಸೀದಿಗೆ ವಿದಾಯ ಹೇಳಿ ತಮ್ಮ ಮನೆಗಳಿಗೆ ತೆರಳುವ ಭಾವನಾತ್ಮಕ ಕ್ಷಣ ಅದು. ವಿಶ್ವದ ಮೂಲೆ ಮೂಲೆಗಳಿಂದ ಈ ಪವಿತ್ರ ಕ್ಷೇತ್ರಕ್ಕೆ ಆಗಮಿಸಿದ್ದ ಯಾತ್ರಾರ್ಥಿಗಳು, ಕಣ್ಣೀರಧಾರೆಯೊಂದಿಗೆ, ಮಸೀದಿಯತ್ತ ಕೈಬೀಸಿ ವಿದಾಯ ಹೇಳುವ ದೃಶ್ಯ ಕಂಡುಬಂತು.
ಹಜ್ ಯಾತ್ರೆ ಋತುವಿನ ಮುಕ್ತಾಯ ಅಂಗವಾಗಿ, ಮದೀನಾದ ಗವರ್ನರ್, ಯುವರಾಜ ಫೈಝಲ್ ಬಿಲ್ ಸಲ್ಮಾನ್ ಅವರು ಯಾತ್ರಾರ್ಥಿಗಳ ಸ್ವಾಗತ ವ್ಯವಸ್ಥೆ ಹಾಗೂ ನಿರ್ಗಮನ ಕೇಂದ್ರಗಳನ್ನು ಪರಿಶೀಲಿಸಿದರು. "ದೇವರ ಅತಿಥಿಗಳಿಗೆ ನಮ್ಮ ಸಾಮ್ರಾಜ್ಯ ಅತ್ಯುತ್ತಮ ಸೇವೆಯನ್ನು ಒದಗಿಸಲು ಬದ್ಧವಾಗಿದೆ. ಯಾವಾಗಲೂ ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇವೆ. ದೇವರ ಅತಿಥಿಗಳಿಗೆ ಸೇವೆ ಮಾಡುವುದು ನಮಗೆ ಹೆಮ್ಮೆ" ಎಂದು ಆತ್ಮೀಯವಾಗಿ ನುಡಿದರು.
"ಹಜ್ ಯಾತ್ರಿಗಳು ತಮ್ಮ ಧಾರ್ಮಿಕ ವಿಧಿಗಳನ್ನು ಸುಲಭವಾಗಿ, ಶಾಂತಿಯುತ ಹಾಗೂ ಆರಾಮದಾಯಕವಾಗಿ ನೆರವೇರಿಸಲು ಅನುವಾಗುವಂತೆ ಸಾಮ್ರಾಜ್ಯ ಸಣ್ಣಪುಟ್ಟ ವಿಷಯಗಳ ಬಗ್ಗೆ ಕೂಡಾ ಗಮನ ಹರಿಸಿದೆ" ಎಂದು ಯುವರಾಜ ಸಲ್ಮಾನ್ ಹೇಳಿದರು.
ಹಜ್ ವಿಧಿವಿಧಾನಗಳನ್ನು ಪೂರೈಸಿದ 1,40,640 ಯಾತ್ರಿಗಳು ಮದೀನಾದಲ್ಲಿರುವ ಪ್ರವಾದಿಯ ಮಸೀದಿಗೆ ಭೇಟಿ ನೀಡಿದ್ದರು. ಮದೀನಾಗೆ ಆಗಮಿಸಿದ ಯಾತ್ರಿಗಳ ಪೈಕಿ 32,034 ಮಂದಿ ಈಗಾಗಲೇ ತಮ್ಮ ದೇಶಗಳಿಗೆ ವಾಪಸ್ಸಾಗಿದ್ದಾರೆ ಎಂದು ಪ್ರಕಟಣೆ ಹೇಳಿದೆ. 25279 ಮಂದಿ ಯಾತ್ರಿಗಳು ಸೋಮವಾರ ಮದೀನಾಗೆ ಆಗಮಿಸಿದ್ದು, 19222 ಮಂದಿ ಅದೇ ವಾಪಸ್ಸಾಗಿದ್ದಾರೆ. ಉಳಿದ 8433 ಮಂದಿಯ ಪೈಕಿ 24 ಮಂದಿಯನ್ನು ಮದೀನಾದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.
ಪ್ರಿನ್ಸ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 18741 ಮಂದಿ ವಾಪಸ್ಸಾಗಿದ್ದಾರೆ. 155 ವಿಮಾನಗಳು ಪ್ರಯಾಣಿಕರನ್ನು ಆಯಾ ದೇಶಗಳಿಗೆ ಹೊತ್ತೊಯ್ದಿವೆ ಎಂದು ವಿವರಿಸಿದೆ.







