ಸರಕಾರಕ್ಕೆ ಸಂಪೂರ್ಣ ಬೆಂಬಲ: ದ.ಕ. ಜಿಲ್ಲಾ ಬಿಜೆಪಿ
ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಿ!

ಮಂಗಳೂರು, ಸೆ.21: ನಮ್ಮಲ್ಲೇ ನೀರು ಇಲ್ಲದಿರುವಾಗ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸದಿರುವುದೇ ನಮ್ಮ ಮುಂದಿರುವ ಅವಕಾಶ. ಈ ಬಗ್ಗೆ ರಾಜ್ಯ ಸರಕಾರದ ಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡಲಿದ್ದೇವೆ ಎಂದು ದ.ಕ. ಜಿಲ್ಲಾ ಬಿಜೆಪಿ ಹೇಳಿದೆ.
ಬಿಜೆಪಿಯ ದ.ಕ. ಜಿಲ್ಲಾ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಕಾವೇರಿ ನದಿ ವಿವಾದದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ರಾಜ್ಯ ವಿಧಾನ ಪರಿಷತ್‌ನ ವಿಪಕ್ಷ ನಾಯಕ ಗಣೇಶ್ ಕಾರ್ಣಿಕ್ ಈ ಪ್ರತಿಕ್ರಿಯೆ ನೀಡಿದರು. ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿ ಕೇಂದ್ರ ಸರಕಾರದ ಮಧ್ಯ ಪ್ರವೇಶವನ್ನು ಬಯಸುವ ಬದಲು ತಮಿಳುನಾಡಿಗೆ ನೀರು ಹರಿಸುವುದನ್ನೇ ನಿಲ್ಲಿಸಬೇಕು. ರಾಜ್ಯದ ಹಿತರಕ್ಷಣೆಯ ದೃಷ್ಟಿಯಲ್ಲಿ ಈ ಕಾರ್ಯವನ್ನು ಸರಕಾರ ಮಾಡಬೇಕಿದೆ. ಮುಂದೆ ಇದರಿಂದ ಆಗಬಹುದಾದ ಪರಿಣಾಮಗಳಿಗೆ ಸರಕಾರದ ಜತೆ ನಾವು ಬೆಂಬಲವಾಗಿ ನಿಲ್ಲುತ್ತೇವೆ ಎಂದರು.
ರಾಜ್ಯದಲ್ಲಿ ಮುಂಗಾರಿನಲ್ಲೇ ಮಳೆ ಇಲ್ಲದೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹಾಯಿಸಿದರೆ ಮುಂದಿನ ಎರಡು ತಿಂಗಳಲ್ಲೇ ರಾಜ್ಯದಲ್ಲಿ ನೀರಿಗೆ ತೊಂದರೆ ಪಡಬೇಕಾದೀತು. ತಮಿಳುನಾಡಿನಲ್ಲಿ ಇನ್ನಷ್ಟೇ ಮಳೆಗಾಲ ಆರಂಭವಾಗಬೇಕಿದೆ. ಹಾಗಾಗಿ ರಾಜ್ಯ ಸರಕಾರವೇ ಈ ಕುರಿತು ದಿಟ್ಟ ಹೆಜ್ಜೆಯನ್ನು ಇರಿಸಬೇಕೆಂದು ಹೇಳಿದ ಅವರು ಕೇಂದ್ರ ಸರಕಾರದ ಮಧ್ಯ ಪ್ರವೇಶದ ಅನಿವಾರ್ಯತೆಯನ್ನು ನಿರಾಕರಿಸಿದರು.
ಸುಳ್ಯದಲ್ಲಿ ಮತಾಂತರದ ವಿರುದ್ಧದ ಕುರಿತಂತೆ ಪ್ರತಿಕ್ರಿಯಿಸಿದ ಗಣೇಶ್ ಕಾರ್ಣಿಕ್, ಮತಾಂತರದ ವಿರುದ್ದ ಜನಜಾಗೃತಿಯ ಪರಿಣಾಮವಾಗಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಆಮಿಷದ ಮೂಲಕ ಮತಾಂತರ ಮಾಡಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಇದು ಜಿಲ್ಲೆಯ ಕಾನೂನು ಸುವಯವಸ್ಥೆಗ ಧಕ್ಕೆಯಾಗುತ್ತಿದೆ. ಸರಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಗರದ ಅಭಿವೃದ್ಧಿಯಲ್ಲಿ ‘ಸ್ಮಾರ್ಟ್ ಸಿಟಿ’ ಯೋಜನೆ ಮಹತ್ತರ
ದೇಶದ 2ನೆ ಸ್ತರದ ನಗರಗಳನ್ನು ಅಭಿವೃದ್ಧಿಗೊಳಿಸುವ ದಿಸೆಯಲ್ಲಿ ಕೇಂದ್ರ ಸರಕಾರದ ಬಹು ನಿರೀಕ್ಷಿತ ಸ್ಮಾರ್ಟ್ ಸಿಟಿ ಯೋಜನೆ ಅತ್ಯಂತ ಮಹತ್ತರವಾದುದು ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ಸುಮಾರು 20 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿಯ ಸದಸ್ಯರನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸುತ್ತಿರುವುದರಿಂದ ಜಿಲ್ಲೆಯ ಜನತೆಗೆ ಈ ಯೋಜನೆಗೆ ಕೇಂದ್ರ ಸರಕಾರದ ಮಹತ್ವದ ಕೊಡುಗೆಯಾಗಿದೆ. ಈ ಯೋಜನೆಯನ್ನು ಸಮಯದಲ್ಲಿ ಜಾರಿಗೊಳಿಸಲು ಮತ್ತು ಕಾರ್ಯಾರಂಭಿಸಲು ರಾಜ್ಯ ಸರಕಾರ, ಮನಪಾ ಹಾಗೂ ಜಿಲ್ಲಾಡಳಿತ ಸಹಕಾರ ನೀಡುವ ಮೂಲಕ ಮಂಗಳೂರು ನಗರವನ್ನು ಮಾದರಿ ಸ್ಮಾರ್ಟ್ ಸಿಟಿಯಾಗಿಸಬೇಕು ಎಂದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಾಜಿ ಶಾಸಕ ಯೋಗೀಶ್ ಭಟ್, ಮೋನಪ್ಪ ಭಂಡಾರಿ, ಪ್ರೇಮಾನಂದ ಶೆಟ್ಟಿ, ರೂಪಾಡಿ ಬಂಗೇರಾ, ಸುಧೀರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







