ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕ್ರಮಕ್ಕೆ ಸಿಎಂ, ಗೃಹಸಚಿವರಿಗೆ ಮನವಿ: ಇಬ್ರಾಹೀಂ ಕೋಡಿಜಾಲ್

ಮಂಗಳೂರು, ಸೆ.21: ಇತ್ತೀಚೆಗೆ ಸುಳ್ಯದಲ್ಲಿ ಉದ್ರೇಕಕಾರಿ ಭಾಷಣ ಮಾಡಿದ ಆರೆಸ್ಸೆಸ್ ಮುಖಂಡ ಪ್ರಭಾಕರ್ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ, ಗೃಹಸಚಿವರಿಗೆ ಮನವಿ ನೀಡಲಾಗುವುದು ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಜಿಲ್ಲಾಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಹೇಳಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡುವ ಮೂಲಕ ಜಿಲ್ಲೆಯಲ್ಲಿ ಕೋಮು ಗಲಭೆಗಳಿಗೆ ಅವಕಾಶ ನೀಡುವಂಥ ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸುಳ್ಯದಲ್ಲಿ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಭಾಷಣ ಮಾಡಿರುವುದು ಜಿಲ್ಲೆಯ ಮಟ್ಟಿಗೆ ಒಳ್ಳೆಯ ಬೆಳವಣಿಗೆ ಅಲ್ಲ. ಹಿಂದು-ಮುಸ್ಲಿಮರು ಪರಸ್ಪರ ಮಾತನಾಡಬಾರದು ಎಂಬ ರ್ಮಾನು ಸಂವಿಧಾನ ವಿರೋಧಿ ಎಂದು ಅವರು ಹೇಳಿದರು.
ಉದ್ರೇಕಕಾರಿ ಭಾಷಣದ ಮೂಲಕ ರಾಜಕೀಯ ಲಾಭ ಪಡೆಯುತ್ತಿದ್ದ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಇದೀಗ ಮತ್ತೆ ಅದನ್ನು ಮುಂದುವರಿಸಿದ್ದಾರೆ. ಮುಂದಿನ ಚುನಾವಣೆ ದೃಷ್ಟಿಯಿಂದ ನಡೆಯುವ ಇಂಥ ಮಾತುಕತೆಗಳಿಗೆ ಯುವಜನತೆ, ಮತದಾರರು ಬಲಿಯಾಗಬಾರದು ಎಂದರು.





