ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಬೇಕು: ವೈಎಸ್‌ವಿ ದತ್ತ

ಬೆಂಗಳೂರು, ಸೆ.21: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ವೈಎಸ್‌ವಿ ದತ್ತ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಸಕಾಂಗ ಹಾಗೂ ನ್ಯಾಯಾಂಗದ ಪರಮಾಧಿಕಾರದ ನಡುವೆ ತಿಕ್ಕಾಟ ಆರಂಭವಾಗಿದೆ. ನ್ಯಾಯಾಂಗವು ಶಾಸಕಾಂಗದ ಮೇಲೆ ಸವಾರಿ ಮಾಡಲು ಹೊರಟಿದೆ ಎಂದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಸಕಾಂಗ ವ್ಯವಸ್ಥೆ ಇರಬೇಕೆ, ಬೇಡವೊ ಎಂಬ ಪ್ರಶ್ನೆ ಉದ್ಭವವಾಗಿದೆ. 224 ಶಾಸಕರು ಹಾಗೂ 28 ಸಂಸದರು ಸಾಮೂಹಿಕ ರಾಜೀನಾಮೆಯನ್ನು ನೀಡುವ ಮೂಲಕ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಬೇಕು ಎಂದು ದತ್ತ ಆಗ್ರಹಿಸಿದರು.
ಒಕ್ಕೂಟ ವ್ಯವಸ್ಥೆಯ ಪ್ರಧಾನ ಸೂತ್ರಧಾರಿ ನರೇಂದ್ರಮೋದಿ ಈ ವಿಚಾರದಲ್ಲಿ ವೌನ ವಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ಸಮಯ ನಿಗದಿ ಮಾಡುವಂತೆ ಕೋರಿ ಐದು ಪತ್ರಗಳನ್ನು ಬರೆದರೂ ಸೌಜನ್ಯಕ್ಕೂ ಅವರನ್ನು ಕರೆಸಿ ಮಾತನಾಡಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಲ್ಲ. ಇಡೀ ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಪ್ರಧಾನಿ ನೆನಪಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.
ಕಾವೇರಿ ವಿಚಾರದಲ್ಲಿ ಜನರ ಆಕ್ರೋಶವು ಬಿಜೆಪಿ ಹಾಗೂ ಕೇಂದ್ರ ಸರಕಾರದ ಕಡೆ ತಿರುಗಿದೆ. ಆದುದರಿಂದಲೆ, ಬಿಜೆಪಿ ಮುಖಂಡರು ಮುಖಮುಚ್ಚಿಕೊಂಡು ತಿರುಗಾಡುತ್ತಿದ್ದಾರೆ ಎಂದು ದತ್ತ ಕಿಡಿಕಾರಿದರು.







