ಭಯೋತ್ಪಾದಕನ ಕುರಿತು 2014ರಲ್ಲೇ ಎಫ್‌ಬಿಐಗೆ ಮಾಹಿತಿ ನೀಡಿದ್ದ ಆತನ ತಂದೆ !

ನ್ಯೂಯಾರ್ಕ್, ಸೆ. 21: ನ್ಯೂಯಾರ್ಕ್ ಮತ್ತು ನ್ಯೂಜರ್ಸಿಗಳಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಗಳ ಆರೋಪಿಯ ತಂದೆ 2014ರಲ್ಲಿ ಎಫ್‌ಬಿಐಯನ್ನು ಸಂಪರ್ಕಿಸಿ, ತನ್ನ ಮಗ ಭಯೋತ್ಪಾದಕ ಎಂಬುದಾಗಿ ಹೇಳಿದ್ದರು ಎಂದು ಕಾನೂನು ಅನುಷ್ಠಾನ ಸಂಸ್ಥೆಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಆದರೆ, ಬಳಿಕ ತನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆದ ಅವರು, ತನ್ನ ಮಗ ಗುಂಪು ಕಟ್ಟಿಕೊಂಡು ತಿರುಗಾಡುತ್ತಾನೆ ಹಾಗೂ ಪುಂಡನಂತೆ ವರ್ತಿಸುತ್ತಾನೆ ಎನ್ನುವುದು ತನ್ನ ಹೇಳಿಕೆಯ ಅರ್ಥವಾಗಿತ್ತು ಎಂದು ಹೇಳಿದ್ದರು.
ಸ್ಫೋಟಗಳ ಆರೋಪಿ ಅಹ್ಮದ್ ಖಾನ್ ರಹಾಮಿ ತನ್ನ ಸಹೋದರನಿಗೆ ಇರಿದ ಬಳಿಕ ತಂದೆ ಎಫ್‌ಬಿಐ ಬಳಿಗೆ ಹೋಗಿದ್ದರು.
ಅಂದು ಈ ಪ್ರಕರಣವನ್ನು ಎಫ್‌ಬಿಐ ಪರಿಶೀಲಿಸಿತ್ತು. ತನ್ನ ಮಾಹಿತಿ ಕೋಶದಲ್ಲಿ ತಡಕಾಡಿದ ಅದಕ್ಕೆ, ಆರೋಪಿಗೆ ಭಯೋತ್ಪಾದಕರೊಂದಿಗೆ ನಂಟಿದೆ ಅಥವಾ ಆತನಿಂದ ಅಮೆರಿಕಕ್ಕೆ ಬೆದರಿಕೆಯಿದೆ ಎಂಬುದಕ್ಕೆ ಪುರಾವೆ ಸಂಗ್ರಹಿಸಲು ಆಗಿರಲಿಲ್ಲ.
ಅವಳಿ ಬಾಂಬ್ ಸ್ಫೋಟಗಳ ಬಳಿಕ, ಸೋಮವಾರ ತನ್ನನ್ನು ಹಿಡಿಯಲು ಬಂದ ಪೊಲೀಸ್ ಅಧಿಕಾರಿಗಳ ವಿರುದ್ಧ ಗುಂಡಿನ ದಾಳಿ ಮಾಡಿ ಕೊಲೆಯತ್ನ ನಡೆಸಿದ ಆರೋಪವನ್ನು ರಹಾಮಿಯ ವಿರುದ್ಧ ಹೊರಿಸಲಾಗಿದೆ.





