ದಲಿತರ ಮೇಲಿನ ಕಿರುಕುಳ ತಡೆಗೆ ಒತ್ತಾಯಿಸಿ ಡಿಸಿಗೆ ಮನವಿ

ಚಿಕ್ಕಮಗಳೂರು, ಸೆ.21: ಜಿಲ್ಲೆಯ ಹುರಳೀಹಳ್ಳಿ ಮತ್ತು ಕಲ್ಲುಕುಡಿಗೆ ಗ್ರಾಮದಲ್ಲಿ ಮೇಲ್ವರ್ಗದವರು ದಲಿತರಿಗೆ ನೀಡುತ್ತಿರುವ ಕಿರುಕುಳವನ್ನು ತಡೆಗಟ್ಟುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಸಮಿತಿಯ ಜಿಲ್ಲಾ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ನೇತೃತ್ವದಲ್ಲಿ ಸಂತ್ರಸ್ತ ದಲಿತ ಕುಟುಂಬಗಳೊಂದಿಗೆ ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಅವರನ್ನು ಬುಧವಾರ ಭೇಟಿ ಮಾಡಿದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ತರೀಕೆರೆ ಎನ್.ವೆಂಕಟೇಶ್ ಮಾತನಾಡಿ, ತರೀಕೆರೆ ತಾಲೂಕಿನ ಹುರಳೀಹಳ್ಳಿಯ ಸ.ನಂ. 117ರಲ್ಲಿ ದಲಿತ ಡಿ.ಮಹೇಶ್ ಹಾಗೂ ದಿವ್ಯಾ ದಂಪತಿಗೆ 2003ರಲ್ಲಿ 3 ಎಕರೆ 20 ಗುಂಟೆ ಜಮೀನು ದರಖಾಸ್ತು ಮೂಲಕ ಮಂಜೂರಾಗಿದೆ. ಆದರೆ ಎಂ.ಸಿ.ಹಳ್ಳಿಯ ಮಣಿ ಎಂಬವರು ಈ ಕುಟುಂಬಕ್ಕೆ ಆ ಜಮೀನಿನಲ್ಲಿ ಸಾಗುವಳಿ ಮಾಡಲು ಬಿಡದೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಅದೇ ರೀತಿ ಮೂಡಿಗೆರೆ ತಾಲೂಕಿನ ಕಲ್ಲುಕುಡಿಗೆ ಗ್ರಾಮದಲ್ಲಿ ಕೆ.ಆರ್.ರಾಘವ, ಕೆ.ಆರ್.ವಿದ್ಯಾನಂದ ಮತ್ತು ಕೆ.ಆರ್.ಗಣೇಶ ಇವರು ತಮ್ಮ ತಂದೆಗೆ 1972ರಲ್ಲಿ ಮಂಜೂರಾದ ಒಂದೂವರೆ ಎಕರೆ ಭೂಮಿಯಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದು ಭೂಮಿ ಮತ್ತು ಮನೆಯ ಹಕ್ಕು ಪತ್ರ ಸಹ ಪಡೆದಿದ್ದಾರೆ.
ಈ ಸಹೋದರರ ಮನೆಗಳಿಗೆ ತೆರಳಲು ಗೋಮಾಳದ ಖರಾಬಿನಲ್ಲಿ ರಸ್ತೆ ಇದ್ದು ಅದನ್ನು ನಾಗೇಶ್ ಭಟ್ ಮತ್ತು ಸುಬ್ರಹ್ಮಣ್ಯ ಭಟ್‌ಎಂಬವರು ಅತಿಕ್ರಮಿಸಿ ಆ ಜಾಗದಲ್ಲಿ ನಡೆದಾಡಲು ಬಿಡದೆ ತೊಂದರೆ ನೀಡುತ್ತಿದ್ದಾರೆ. ಇದರ ಜೊತೆಗೆ ಈ ಸಹೋದರರಿಗೆ ಸೇರಿದ ಜಾಗದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿರುವ ಅವರು ನೀರನ್ನು ಬಳಸಲು ಆ ಕುಟುಂಬಗಳಿಗೆ ಬಿಡುತ್ತಿಲ್ಲ ಸದರಿ ಜಾಗವನ್ನು ಬಿಟ್ಟು ಹೋಗುವಂತೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಈ ಎರಡೂ ಗ್ರಾಮಗಳ ದಲಿತರನ್ನು ಮೇಲ್ವರ್ಗದವರು ನೀಡುತ್ತಿರುವ ಕಿರುಕುಳದಿಂದ ಪಾರುಮಾಡುವಂತೆ ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕಿ ಶಶಿಕಲಾ, ಜಿಲ್ಲಾ ಸಂಘಟನಾ ಸಂಚಾಲಕ ಮರ್ಲೆ ಅಣ್ಣಯ್ಯ, ಕಸಬಾ ಹೋಬಳಿ ಸಂಚಾಲಕ ಹೂವಯ್ಯ ಉಪಸ್ಥಿತರಿದ್ದರು.







