ಕಾವೇರಿ ವಿವಾದ: ಬತ್ತಿದ ಕೆರೆಯಲ್ಲಿ ಪ್ರತಿಭಟನೆ

ಚಿಕ್ಕಮಗಳೂರು, ಸೆ.21: ಕಾವೇರಿ ನೀರಿಗಾಗಿ ತಮಿಳುನಾಡು ಮುಖ್ಯಮಂತ್ರಿ ದುರಾಸೆಯ ಹಠಮಾರಿ ಧೋರಣೆ ಅನುಸರಿಸುತ್ತಿದ್ದರೆ ಕರ್ನಾಟಕದ ಸರ್ವಪಕ್ಷ ಜನಪ್ರತಿನಿಧಿಗಳು ಕಿಲಾಡಿ ರಾಜಕಾರಣ ಮಾಡುತ್ತ ರಾಜ್ಯದ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ ಎಂದು ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಟೀಕಿಸಿದ್ದಾರೆ.
ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವ ಕ್ರಮ ವಿರೋಧಿಸಿ ಬುಧವಾರ ಕನ್ನಡಸೇನೆ ಕರ್ನಾಟಕದ ಜಿಲ್ಲಾ ಘಟಕ ಬರಿದಾಗಿದ್ದ ಮಾಗಡಿ ಕೆರೆಯಲ್ಲಿ ಕಣ್ಣಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿ ನಂತರ ಮಾತನಾಡಿದರು. ರಾಜ್ಯದೆಲ್ಲೆಡೆ ಮಳೆ ಇಲ್ಲದೆ ಕಾರ್ಮೋಡದ ಛಾಯೆ ಆವರಿಸಿ ಜನರಲ್ಲಿ ಮಂಕುಕವಿದಿರುವಾಗ ಇರುವಂತಹ ಅಲ್ಪಸ್ವಲ್ಪಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕೆಂಬ ನಿರ್ಧಾರ ರೈತರಲ್ಲಿ ದಿಗ್ಭ್ರಾಂತ ಮೂಡಿಸಿದೆ ಎಂದರು.
ಎಲ್ಲೆಡೆ ಕೆರೆ ಕಟ್ಟೆಗಳು ಬತ್ತಿ ಹೋಗಿ, ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಪ್ರಾಣಿ ಪಕ್ಷಿಗಳು ಪರಿತಪಿಸುವ ಸಂದರ್ಭ ಎದುರಾಗಿದೆ. ಇದನ್ನರಿತು ಜಯಲಲಿತಾ ಹಠಮಾರಿತನಕ್ಕೆ ರಾಜ್ಯದ ಸರ್ವಪಕ್ಷಗಳ ಪ್ರತಿನಿಧಿಗಳು ಒಗ್ಗೂಡಿ ಬುದ್ಧಿ ಕಲಿಸಬೇಕೆ ಹೊರತು ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು ಕನ್ನಡಿಗರ ಸ್ವಾಭಿಮಾನವನ್ನು ಕೆಣಕದಿರುವಂತೆ ಎಚ್ಚರಿಸಿದರು.
ನಗರಾಧ್ಯಕ್ಷ ಪ್ರವೀಣ್ ಬೆಟಗೆರೆ ಮಾತನಾಡಿ, ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳು ಕರ್ನಾಟಕವನ್ನು ಬರೀ ವ್ಯಾವಹಾರಿಕವಾಗಿ ಬಳಸಿಕೊಳ್ಳುತ್ತಿದ್ದಾರೆಯೇ ಹೊರತು, ಮತ ನೀಡಿ ರಾಜಕಾರಣಿಗಳನ್ನು ಗಣ್ಯವ್ಯಕ್ತಿಯಾಗಿ ರೂಪಿಸಿದ ಕನ್ನಡಿಗರಿಗೆ ಮೋಸ ಮಾಡುತ್ತಿರುವುದು ಸರಿಯಲ್ಲ. ಹಬ್ಬಗಳು ಬಂತೆಂದರೆ ಕನ್ನಡಿಗರು ತಮಿಳುನಾಡಿನಿಂದ ಪಟಾಕಿಗಳನ್ನು ತಂದು ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿ ಸಹಕರಿಸುತ್ತಾರೆ. ಆದರೆ ಕನ್ನಡಿಗರ ಹಣದಲ್ಲೇ ಮೆರೆಯುತ್ತಾ ಜಯಲಲಿತಾ ಉಂಡ ಮನೆಗೆ ದ್ರೋಹ ಬಗೆಯುತ್ತಾರೆ. ಈ ಸಂಬಂಧ ರಾಜ್ಯದ ಜನ ಪಟಾಕಿಯನ್ನು ಬಹಿಷ್ಕರಿಸಿ ತಮಿಳುನಾಡಿಗೆ ಸಂದೇಶ ಸಾರಬೇಕು ಎಂದರು.
ಮುಖಂಡರಾದ ನೀಲೇಶ್, ಹೇಮಂತ್, ರಘು, ರಂಜಿತ್, ದೇವರಾಜ್, ಜಯಪ್ರಕಾಶ್, ಡಿಸೋಜಾ, ಶಂಕರ್ ಮತ್ತಿತರರಿದ್ದರು.







