ಕಾವೇರಿ ನೀರು ಹಂಚಿಕೆ: ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹ

ಕುಶಾಲನಗರ, ಸೆ.21: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಪ್ರಧಾನಿ ಅವರು ಮಧ್ಯಸ್ಥಿಕೆ ವಹಿಸಿ ಕರ್ನಾಟಕದ ಜನತೆಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಲ್ಲಿನ ಕಾವೇರಿ ವೃತ್ತದಲ್ಲಿ ರಸ್ತೆ ತಡೆ ನಡೆಸಲಾಯಿತು.
ಪಟ್ಟಣದ ಕಾವೇರಿ ವೃತ್ತದಿಂದ ಹೊರಟ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು, ಅರಣ್ಯ ತಪಾಸಣಾ ಗೇಟ್‌ನ ಮೂಲಕ ಗಣಪತಿ ದೇವಸ್ಥಾನದ ವರೆಗೆ ಮೆರವಣಿಗೆ ನಡೆಸಿ ರಸ್ತೆ ತಡೆ ನಡೆಸಿದರು.
ಈ ಸಂದರ್ಭ ಮಾತನಾಡಿದ ವೆಂಕಟೇಶ ಪೂಜಾರಿ, ಬಹಳ ವರ್ಷಗಳಿಂದಲೂ ಕರ್ನಾಟಕಕ್ಕೆ ಅನ್ಯಾಯ ವಾಗುತ್ತಾ ಬಂದಿದ್ದು, ಕರ್ನಾಟಕದ ಪರ ಸರಿಯಾಗಿ ವಾದ ಮಂಡಿಸುವವರು ಇಲ್ಲದೆ ಇಂದು ರಾಜ್ಯಕ್ಕೆ ಈ ಪರಿಸ್ಥಿತಿ ಬಂದಿದೆ. ರಾಜ್ಯದ ಸಂಸದರು, ಎಲ್ಲಾ ಸರ್ವಪಕ್ಷದವರು ಸೇರಿ ಕಾವೇರಿ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಅವರನ್ನು ಮಧ್ಯಸ್ಥಿಕೆ ವಹಿಸಲು ಸೂಚಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಜಿಲ್ಲಾ ಉಪಾಧ್ಯಕ್ಷ ನಾಗೇಗೌಡ, ಪ್ರಧಾನ ಕಾರ್ಯದರ್ಶಿ ದಿನೇಶ್, ಕಾರ್ಯದರ್ಶಿ ಸತೀಶ್ ಮತ್ತು ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಾಜರಿದ್ದರು. ನಂತರ ಮೆರವಣಿಗೆಯಲ್ಲಿ ತೆರಳಿ ಮನವಿಯನ್ನು ಸಲ್ಲಿಸಲಾಯಿತು.





