‘ಹೋವರ್‌ಕ್ರಾಫ್ಟ್ ನಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಿಲ್ಲ: ಕೋಸ್ಟ್ ಗಾರ್ಡ್ ಅಧಿಕಾರಿ

ಕಾರವಾರ, ಸೆ.21: ನಗರದ ಕಡಲ ತೀರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಹೋವರ್‌ಕ್ರಾಫ್ಟ್ ನಿಲುಗಡೆ ಕೇಂದ್ರದಿಂದ ಸಾರ್ವಜನಿಕರ ಸಂಚಾರ ಅಥವಾ ಮೀನುಗಾರರ ಕೆಲಸಗಳಿಗೆ ಯಾವುದೇ ಅಡ್ಡಿ ಉಂಟಾ ಗುವುದಿಲ್ಲ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.
ಹೋವರ್‌ಕ್ರಾಫ್ಟ್ ನಿಲುಗಡೆಗೆ ಪ್ರಸ್ತುತ ಜಿಲ್ಲಾಡಳಿತ ನೀಡಿರುವ ಜಮೀನು ಹಾಗೂ ಸಮುದ್ರ ತೀರದ ನಡುವೆ ಸುಮಾರು 200ಮೀಟರ್ ಅಂತರವಿದೆ. ಇದರಿಂದಾಗಿ ಹೋವರ್‌ಕ್ರಾಫ್ಟ್ ನಿಲುಗಡೆ ಪ್ರದೇಶದ ಮುಂಭಾಗದ ಸಮುದ್ರ ತೀರದಲ್ಲಿ ಜನಸಾಮಾನ್ಯರ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದರು.
ಈಗಾಗಲೇ ಕಡಲತೀರದ ಬಳಿ ಇರುವ ಕಾಲೇಜು, ಸಮುದಾಯ ಭವನ, ಮರೀನ್ ಬಯೊಲಾಜಿಕಲ್ ಸಂಸ್ಥೆ, ಕೋಸ್ಟಲ್ ಸೆಕ್ಯೂರಿಟಿ ಪೊಲೀಸ್ ಕಟ್ಟಡಗಳ ರೀತಿಯಲ್ಲಿಯೇ ಹೋವರ್‌ಕ್ರಾಫ್ಟ್ ಕೇಂದ್ರ ಕಾರ್ಯ ನಿರ್ವಹಿಸಲಿದೆ. ಕೋಸ್ಟ್‌ಗಾರ್ಡ್ ಕೇಂದ್ರದಿಂದಾಗಿ ಕಡಲತೀರದಲ್ಲಿ ಸಂಚಾರಕ್ಕೆ ಹಾಗೂ ಮೀನುಗಾರಿಕೆಗೆ ನಿರ್ಬಂಧ ಉಂಟಾಗಲಿದೆ ಎನ್ನುವುದು ಸತ್ಯಕ್ಕೆ ದೂರವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಕೋಸ್ಟ್ ಗಾರ್ಡ್ ಈಗಾಗಲೇ ದೇಶದ ಹಲವು ಕರಾವಳಿ ತೀರಗಳಲ್ಲಿ ಕೇಂದ್ರಗಳನ್ನು ಹೊಂದಿದ್ದು, ಯಾವುದೇ ಕಡೆಗಳಲ್ಲಿ ಮೀನುಗಾರರಿಗೆ ಅಥವಾ ಸಾರ್ವಜನಿಕರಿಗೆ ಕೇಂದ್ರದ ಬಳಿಯಲ್ಲಿ ಪ್ರವೇಶ ನಿರ್ಬಂಧಿಸಿಲ್ಲ. ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ೋಸ್ಟ್‌ಗಾರ್ಡ್ ಕೇಂದ್ರ ಸ್ಥಾಪಿಸಲಾಗಿದ್ದು, ಇಲ್ಲಿನ ಕಡಲತೀರದಲ್ಲಿ ಮೀನುಗಾರರು, ಸಾರ್ವಜನಿಕರು, ಪ್ರವಾಸಿಗರ ಮುಕ್ತ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲದಿರುವುದು ಉತ್ತಮ ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ.
ದೇಶದ ಸುರಕ್ಷತೆಯನ್ನು ಕಾಪಾಡಲು, ಸಂಕಷ್ಟಕ್ಕೆ ಸಿಲುಕುವ ಮೀನುಗಾರರ ರಕ್ಷಣೆಗೆ ಕೋಸ್ಟ್‌ಗಾರ್ಡ್ ಕೇಂದ್ರವನ್ನು ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸುವುದು ಅಗತ್ಯವಾಗಿದೆ. ಕೋಡಿಭಾಗ್ ಪ್ರದೇಶದಲ್ಲಿ ಹೋವರ್‌ಕ್ರಾಫ್ಟ್ ಕೇಂದ್ರ ಸ್ಥಾಪನೆಯ ಮೂಲಕ ಈ ಉದ್ದೇಶಗಳನ್ನು ಈಡೇರಿಸಬಹುದಾಗಿದೆ. ಕರಾವಳಿ ಮೂಲಕ ಒದಗಿ ಬರಬಹುದಾದ ಆಂತರಿಕ ಮತ್ತು ಬಾಹ್ಯ ಸಂಭಾವ್ಯ ಬೆದರಿಕೆಗಳನ್ನು ಎದುರಿಸಲು ಇದು ಅಗತ್ಯವಾಗಿದೆ. ದುಷ್ಟಶಕ್ತಿಗಳು ರವೀಂದ್ರನಾಥ ಕಡಲ ತೀರದ ಮೂಲಕ ಕರಾವಳಿಗೆ ನುಸುಳಲು ನಡೆಸುವ ಪ್ರಯತ್ನಗಳನ್ನು ಸಮರ್ಥವಾಗಿ ಎದುರಿಸಲು ಇದರಿಂದ ಸಾಧ್ಯವಾಗಲಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಕಾರವಾರ ಕಡಲತೀರ ಪ್ರವಾಸಿಗರಿಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಲಿರುವ ಹಿನ್ನೆಲೆಯಲ್ಲಿ ಹೋವರ್‌ಕ್ರಾಫ್ಟ್ ಕೇಂದ್ರ ಪೂರಕವಾಗಿ ಕಾರ್ಯ ನಿರ್ವಹಿಸಲಿದೆ. ಕೋಸ್ಟ್‌ಗಾರ್ಡ್ ವತಿಯಿಂದ ಕಡಲ ತೀರ ಸ್ವಚ್ಛತೆಯಂತಹ ಕಾರ್ಯಕ್ರಮಗಳನ್ನು ಸಹ ಕೈಗೊಳ್ಳಲಾಗುತ್ತಿದ್ದು, ಹೋವರ್‌ಕ್ರಾಫ್ಟ್ ಕೇಂದ್ರದ ಸ್ಥಾಪನೆಯಿಂದಾಗಿ ಈ ಭಾಗದ ಕಡಲತೀರದ ಸ್ವಚ್ಛತೆಯನ್ನು ಸಹ ಕಾಪಾಡಲು ಸಾಧ್ಯವಿದೆ ಎಂದಿದ್ದಾರೆ.







