ಕಾರವಾರ: ವಿಶೇಷ ಮಕ್ಕಳ ವೆದ್ಯಕೀಯ ತಪಾಸಣಾ ಶಿಬಿರ
ಕಾರವಾರ, ಸೆ.21: ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲಿ್ಲ ಓದುತ್ತಿರುವ ಸುಮಾರು 313 ವಿಶೇಷ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರ ನಗರದ ಗುರುಭವನದಲ್ಲಿ ನಡೆಯಿತು.
ಕಾರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳ ಕಾರ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳ ಲಾಗಿದ್ದ ಕಾರ್ಯಕ್ರಮದಲ್ಲಿ ವಿವಿಧ ನ್ಯೂನತೆಗಳಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮೌಲ್ಯಾಂಕನ ಶಿಬಿರದ ಮೂಲಕ ತಪಾಸಣೆ ನಡೆಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಡಿ.ಎಂ ಬಸವರಾಜಪ್ಪ ಮಾತನಾಡಿ, ವಿಶೇಷ ಚೇತನರಲ್ಲೂ ಗುರಿ ಸಾಧಿಸುವ ಛಲವಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾದ ಅಗತ್ಯವಿದೆ. ಈ ಬಗ್ಗೆ ಪಾಲಕರು ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಾಂತ ಹೆಗಡೆ ಮಾತನಾಡಿ, ವಿಶೇಷ ಮಕ್ಕಳಿಗೆ ವಿಶೇಷ ಅವಕಾಶ ಕಲ್ಪಿಸುವ ಅಗತ್ಯವಿದೆ. ಮಕ್ಕಳ ಶೈಕ್ಷಣಿಕ ವಿಚಾರದ ಜೊತೆಗೆ ಅವರ ಆರೋಗ್ಯದ ಕಡೆಗೂ ಹೆಚ್ಚಿನ ಕಾಳಜಿ ತೋರಬೇಕು ಎಂದರು. ಮಾ
ನಸಿಕ ತಜ್ಞ ಡಾ.ಸಲೀಂ, ಕ್ಷೇತ್ರ ಸಮನ್ವಯಾಧಿಕಾರಿ ಉಮೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಎಚ್. ನಾಯ್ಕ ವಂದಿಸಿದರು. ತಾಲೂಕು ದೈಹಿಕ ಪರಿವೀಕ್ಷಕ ಆರ್.ಎಚ್. ನಾಯ್ಕ, ಜಿಲ್ಲಾಸ್ಪತ್ರೆಯ ನಿವೃತ್ತ ಸರ್ಜನ್ ಡಾ. ಆರ್.ವಿ. ಕುರ್ಡೇಕರ್, ಸ್ಕಂದ ಶಿಕ್ಷಣ ಸೇವಾ ಸಂಸ್ಥೆಯ ವೈದ್ಯಾಧಿಕಾರಿಗಳು ಮತ್ತಿತರರಿದ್ದರು. ಬೆಂಗಳೂರಿನ ಸ್ಕಂದ ಶಿಕ್ಷಣ ಸೇವಾ ಸಂಸ್ಥೆಯ 5 ವೈದ್ಯರು ಹಾಗೂ ಕಾರವಾರ ಜಿಲ್ಲಾಸ್ಪತ್ರೆಯ 5 ವೈದ್ಯರು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು. ದೃಷ್ಟಿದೋಷವುಳ್ಳ 99, ಶ್ರವಣದೋಷವುಳ್ಳ 95, ವಾಕ್ ದೋಷವುಳ್ಳ 26, ದೈಹಿಕ ವಿಕಲತೆಯುಳ್ಳ 25, ಬಹುವಿಕಲತೆಯುಳ್ಳ 25 ಹಾಗೂ ಬುದ್ದಿಮಾಂದ್ಯವುಳ್ಳ 43 ವಿದ್ಯಾರ್ಥಿಗಳು ತಪಾಸಣೆಗೆ ಒಳಪಟ್ಟರು. ಈ ವೈದ್ಯಕೀಯ ಮೌಲ್ಯಾಂಕನ ಶಿಬಿರದಲ್ಲಿ ಒಟ್ಟು 85 ವಿದ್ಯಾರ್ಥಿಗಳಿಗೆ ಸಾಧನ ಸಲಕರಣೆಗಳು, 38 ವಿದ್ಯಾರ್ಥಿಗಳಿಗೆ ವೈದ್ಯಕೀಯ ಪ್ರಮಾಣಪತ್ರ ವಿತರಿಸಲಾಯಿತು. 2 ದೃಷ್ಟಿದೋಷ ಹೊಂದಿದ ವಿದ್ಯಾರ್ಥಿಗಳಿಗೆ ಕರೆಕ್ಟೀವ್ ಸರ್ಜರಿಗೆ ವೈದ್ಯರು ಶಿಫಾರಸು ಮಾಡಿದರು.







