ಮಡಿಕೇರಿ: ಗಾಂಧಿ ಮಂಟಪದ ಎದುರು ಉದ್ಯಾನವನ

ಮಡಿಕೇರಿ, ಸೆ.21: ನಗರದಲ್ಲಿ ಗಾಂಧಿ ಸ್ಮಾರಕ ನಿರ್ಮಾಣದ ಯೋಜನೆ ನನೆಗುದಿಗೆ ಬಿದ್ದಿರುವ ಬೆನ್ನೆಲ್ಲೇ ಗಾಂಧಿ ಮಂಟಪದ ಮುಂಭಾಗದಲ್ಲಿ ಉದ್ಯಾನವನ ನಿರ್ಮಿಸಲು ಈಗಾಗಲೇ ನಗರಸಭೆ ಕಾರ್ಯೋನ್ಮುಖವಾಗಿದೆ.
ಸುಮಾರು 4.50 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಾಣಗೊಳ್ಳುತ್ತಿದ್ದು, ನಗರಸಭೆ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಬಸ್, ಲಾರಿ ಸೇರಿದಂತೆ ಭಾರೀ ವಾಹನಗಳ ನಿಲುಗಡೆಯಿಂದ ಸಂಪೂರ್ಣವಾಗಿ ಹದಗೆಟ್ಟಿದ್ದ ಗಾಂಧಿ ಮೈದಾನಕ್ಕೆ ತಡವಾಗಿಯಾದರೂ ತಡೆಗೋಡೆ ಆವರಣ ನಿರ್ಮಿಸಿ ಮೈದಾನದ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಇದರ ಜೊತೆಯಲ್ಲೇ ಗಾಂಧಿ ಮಂಟಪದ ಮುಂಭಾಗದ ಜಾಗವನ್ನು ಉದ್ಯಾನವನಕ್ಕಾಗಿ ಮೀಸಲಿಟ್ಟಿದ್ದು, ಈಗಾಗಲೇ ಕಾಮಗಾರಿ ಆರಂಭಗೊಂಡಿದೆ. ಆದರೆ ಉದ್ದೇಶಿತ ಮಹತ್ವಾಕಾಂಕ್ಷೆಯ ಯೋಜನೆಯಾದ ಗಾಂಧಿ ಸ್ಮಾರಕ ನಿರ್ಮಾಣದ ಕಾರ್ಯ ಮಾತ್ರ ಹಗಲುಕನಸಾಗಿಯೇ ಉಳಿದಿದ್ದು, ಮಹಾತ್ಮ ಗಾಂಧಿಯ ಚಿತಾಭಸ್ಮ ಜಿಲ್ಲಾ ಖಜಾನೆ ಇಲಾಖೆಯಲ್ಲಿ ಉಳಿಯುವಂತಾಗಿದೆ. ಸುಮಾರು 10 ವರ್ಷಗಳ ಹಿಂದೆ ಉತ್ಸಾಹಿ ಅಧಿಕಾರಿಯಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಬಲದೇವಕೃಷ್ಣ ಆಬಳಿಕ ಅಧಿಕಾರ ವಹಿಸಿಕೊಂಡ ಜಿಲ್ಲಾಧಿಕಾರಿಗಳಾದ ಸುಬೋದ್ ಯಾದವ್, ಅನುರಾಗ್ ತಿವಾರಿಯವರು ಗಾಂಧಿ ಸ್ಮಾರಕ ನಿರ್ಮಾಣದ ಬಗ್ಗೆ ಅತೀ ಆಸಕ್ತಿ ತೋರಿ ಯೋಜನೆಗಳನ್ನು ರೂಪಿಸಿದರಾದರೂ ಇಲ್ಲಿಯವರೆಗೆ ಸ್ಮಾರಕ ನಿರ್ಮಾಣಗೊಂಡಿಲ್ಲ. ಗಾಂಧಿ ಮಂಟಪದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸರ್ವೋದಯ ಸಮಿತಿ ಕೂಡ ಕೈಜೋಡಿಸಿ ಸುಮಾರು 80 ಲಕ್ಷ ರೂ.ನ ಯೋಜನೆ ರೂಪುಗೊಂಡಿತು. ಆದರೆ ಈವರೆಗೆ ಯಾವುದೂ ಕೈ
ೂಡಲಿಲ್ಲ. ಅಧಿಕಾರಿಗಳು ಅಭಿವೃದ್ಧಿಯ ಬಗ್ಗೆ ನೈಜ ಕಾಳಜಿ ತೋರಿ ದರೂ ಜನಪ್ರತಿನಿ ಧಿಗಳ ಸ್ವಪ್ರತಿಷ್ಠೆ ವ
ುತ್ತು ಇಚ್ಛಾ ಶಕ್ತಿಯ ಕೊರತೆಯಿಂದಾಗಿ ಯೋಜನೆಗಳು ಸಿದ್ಧವಾಗುತ್ತವೆಯೇ ಹೊರತು ಕಾಮಗಾರಿ ಮಾತ್ರ ಆರಂಭಗೊಳ್ಳುತ್ತಿಲ್ಲ. ಇತ್ತೀಚೆಗೆ ನಗರಸಭೆ ಉದ್ಯಾನವನ ನಿರ್ಮಾಣಕ್ಕೆ ಮುಂದಾಗಿದೆ. ಎಲ್ಲಾ ಯೋಜನೆಗಳಂತೆ ಈ ಯೋಜನೆಯೂ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತಾಗುವುದೋ ಎನ್ನುವುದನ್ನು ಕಾದು ನೋಡಬೇಕಾಗಿದೆ. ವರ್ಷಕ್ಕೆ ಒಂದು ಬಾರಿ ಗಾಂಧೀಜಿಯವರ ಪುಣ್ಯತಿಥಿಯಂದು ಮಾತ್ರ ಮಡಿಕೇರಿಯಲ್ಲಿರುವ ಚಿತಾಭಸ್ಮಕ್ಕೆ ಗೌರವ ಸಲ್ಲಿಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಮಹಾತ್ಮ ಗಾಂಧಿಯನ್ನು ಸ್ಮರಿಸುವ ಭಾಗ್ಯ ಸ್ಮಾರಕದ ಮೂಲಕ ಪ್ರವಾಸಿಗರಿಗೂ ಸಿಗಲಿ ಎನ್ನುವ ಉದ್ದೇಶ ಹಲವು ಮಂದಿ ಹಿರಿಯರದ್ದಾಗಿತ್ತು ಮತ್ತು ಅಧಿಕಾರಿಗಳದ್ದಾಗಿತ್ತು. ಆದರೆ ಇಂದಿಗೂ ಗಾಂಧಿ ಚಿತಾಭಸ್ಮ ಖಜಾನೆ ಇಲಾಖೆಯಲ್ಲೇ ಧೂಳು ಹಿಡಿಯುತ್ತಿದೆ.
ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ನಡೆದಿದೆ ಟೆಂಡರ್ ಪ್ರಕ್ರಿಯೆ: ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಗೆ ಬಲಿಯಾಗಿರುವ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆ ನೂತನ ಖಾಸಗಿ ಬಸ್ ನಿಲ್ದಾಣದ ನಿರ್ಮಾಣ. ಈ ಯೋಜನೆಗಾಗಿ ರೇಸ್‌ಕೋರ್ಸ್ ರಸ್ತೆಯಲ್ಲಿ ಮೂರು ಎಕರೆ ಜಾಗ ಮೀಸಲಿದೆಯಾದರೂ ರಾಜಕೀಯ ಪಕ್ಷಗಳ ಹಗ್ಗ ಜಗ್ಗಾಟ ಮತ್ತು ರಾಜ್ಯ ಸರಕಾರದ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ಶಾಸಕದ್ವಯರ ಪ್ರಯತ್ನದಿಂದಾಗಿ ಜಾಗ ಮಂಜೂರಾಗಿತ್ತಾದರೂ ನಗರಸಭೆಯ ಕೆಲವು ಬಿಜೆಪಿ ಸದಸ್ಯರೇ ಈ ಜಾಗದ ಬಗ್ಗೆ ಆಕ್ಷೇಪ ಮತ್ತು ಗೊಂದಲ ಸೃಷ್ಟಿಸಿದ ಕಾರಣ ಯೋಜನೆ ವಿಳಂಬವಾಗುವಂತಾಗಿದೆ ಎಂದು ನಗರಸಭೆಯ ಸದಸ್ಯರೊಬ್ಬರು ದೂರಿದ್ದಾರೆ.
ಈ ಹಿಂದೆ ಬೂಟ್ ಮಾದರಿಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸುಮಾರು 30 ಕೋಟಿ ರೂ. ಯೋಜನೆಯನ್ನು ರೂಪಿಸಲಾಗಿತ್ತು. ಆದರೆ, ಈಗ ಆ ಯೋಜನೆಯನ್ನು ಕೈಬಿಟ್ಟು, 4.99 ಕೋಟಿ ರೂ.ಗಳ ನೂತನ ಯೋಜನೆ ಸಿದ್ಧಗೊಂಡಿದೆ. ನಗರಸಭೆಯ ಮೂಲಕವೇ ಕಾಮಗಾರಿ ನಡೆಯಲಿದ್ದು, ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ನಗರಸಭೆಯ ಆಯುಕ್ತೆ ಬಿ.ಬಿ.ಪುಷ್ಪಾವತಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಹಲವು ಬಾರಿ, ಹಲವರಿಂದ ಶಂಕು ಸ್ಥಾಪನೆಗೊಂಡ ಈ ಯೋಜನೆ ಖಾಸಗಿ ಬಸ್‌ಗಳಿಗೆ ಯಾವಾಗ ನಿಲುಗಡೆ ಭಾಗ್ಯ ಕಲ್ಪಿಸುತ್ತದೆ ಎನ್ನುವುದನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೇ ತಿಳಿಸಬೇಕಾಗಿದೆ. ಆದರೆ ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಅನೇಕ ಯೋಜನೆಗಳು ಶಂಕುಸ್ಥಾಪನೆಗೊಂಡು ನನೆಗುದಿಗೆ ಬಿದ್ದರುವ ಕಾರಣ ಯಾವುದೇ ಯೋಜನೆಗಳ ಬಗ್ಗೆಯೂ ನಗರದ ಜನತೆಗೆ ವಿಶ್ವಾಸ ಉಳಿದುಕೊಂಡಿಲ್ಲ.
ಕಾವೇರಿ ಕಲಾಕ್ಷೇತ್ರಕ್ಕೆ ಎಳ್ಳು ನೀರು: ಜಿಲ್ಲೆಯಲ್ಲಿ ಕಲಾವಿದರ ಸಂಖ್ಯೆ ಕ್ಷೀಣಿಸಲು ಇಲ್ಲಿನ ಅವ್ಯವಸ್ಥೆಗಳೇ ಕಾರಣ. ಕಲಾವಿದರಿಗೆ ಸೂಕ್ತ ಹಾಗೂ ಸುಸಜ್ಜಿತ ಸಭಾಂಗಣ ಅಥವಾ ವೇದಿಕೆಯ ಭಾಗ್ಯ ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಇಲ್ಲ. ಕಳೆದ ಅನೇಕ ವರ್ಷಗಳಿಂದ ಸೋರುತ್ತಿರುವ ಮತ್ತು ಕುಸಿದು ಬೀಳುವ ಹಂತದಲ್ಲಿರುವ ಕಾವೇರಿ ಕಲಾಕ್ಷೇತ್ರದಲ್ಲೇ ಕಾರ್ಯಕ್ರಮಗಳು ನಡೆಯುತ್ತಿವೆ. ಇದರ ಪಕ್ಕದಲ್ಲೇ ನಗರಸಭೆಯಿದ್ದರೂ ಇಲ್ಲಿನ ಸದಸ್ಯರಿಗೆ ಕಲಾಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಾಗಿದೆ. ಕೇವಲ ದಸರಾ ಸಂದರ್ಭ ಸುಣ್ಣಬಣ್ಣ ಬಳಿದು ಸಾರ್ವಜನಿಕರ ಹಣ ಪೋಲು ಮಾಡಲಾಗುತ್ತಿದೆಯೇ ಹೊರತು ಕಲಾವಿದರಿಗೆ ಪ್ರೋತ್ಸಾಹ ನೀಡುವ ಯಾವುದೇ ಆಸಕ್ತಿ ಜನಪ್ರತಿನಿಧಿಗಳಿಗಿಲ್ಲದಾಗಿದೆ ಎಂದು ಜನತೆ ದೂರಿದ್ದಾರೆ.
ಕಾವೇರಿ ಕಲಾಕ್ಷೇತ್ರದ ಹಳೆಯ ಕಟ್ಟಡದ ದುರಸ್ತಿಗೆ ಮಾಡಿದ ಖರ್ಚುವೆಚ್ಚದ ಮೊತ್ತವನ್ನು ಗಮನಿಸಿದರೆ ನೂತನ ಸಭಾಂಗಣವೇ ನಿರ್ಮಾಣವಾಗುತ್ತಿತ್ತು. ಇತ್ತೀಚಿನ ಕೆಲವು ವರ್ಷಗಳಲ್ಲಿ ಕಾವೇರಿ ಕಲಾಕ್ಷೇತ್ರದ ಕಟ್ಟಡವನ್ನು ನೆಲಸಮಗೊಳಿಸಿ ಸುಮಾರು 8 ಕೋಟಿ ರೂ. ವೆಚ್ಚದ ಸುಸಜ್ಜಿತ ಸಭಾಂಗಣ ನಿರ್ಮಾಣದ ಯೋಜನೆ ರೂಪಿಸಲಾಗಿತ್ತು. ಆದರೆ, ಈ ಯೋಜನೆಗೆ ಎಳ್ಳು ನೀರು ಬಿಡಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸುವರ್ಣ ಕರ್ನಾಟಕ ಸಂಭ್ರಮದ ಸಂದರ್ಭ ಮಡಿಕೇರಿಗೆ ಮಂಜೂರಾದ ಸುವರ್ಣ ಭವನದ ಯೋಜನೆ ಕಳೆದ 9 ವರ್ಷಗಳಿಂದ ನನೆಗುದಿಗೆ ಬಿದ್ದಿರುವಾಗ ಇನ್ನು ಕಾವೇರಿ ಕಲಾಕ್ಷೇತ್ರದ ಯೋಜನೆಯ ಬಗ್ಗೆ ಯಾರಿಗಾದರೂ ಕಾಳಜಿ ಇರಲು ಹೇಗೆ ಸಾಧ್ಯ ಎಂದು ಎಂದು ಜಿಲ್ಲೆಯ ಕಲಾವಿದರು ಪ್ರಶ್ನಿಸುತ್ತಿದ್ದಾರೆ.







