ಉಡುಪಿ ನಗರಸಭೆಯಲ್ಲಿ ‘ವಿಶ್ವೇಶ್ವರಯ್ಯ ಸಂಕೀರ್ಣ’ ಗದ್ದಲ

ಉಡುಪಿ, ಸೆ.21: ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ನಗರಸಭೆಗೆ ಸೇರಿದ ವಿಶ್ವೇಶ್ವರಯ್ಯ ತರಕಾರಿ ಮಾರುಕಟ್ಟೆಯಲ್ಲಿರುವ ವಾಣಿಜ್ಯ ಸಂಕೀರ್ಣವನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವ ವಿಚಾರ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಯಿತು.
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಶ್ನೋತ್ತರಕ್ಕೆ ಅವಕಾಶ ನೀಡದೆ ನೇರವಾಗಿ ಅಜೆಂಡಾದಲ್ಲಿರುವ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭ ವಿಪಕ್ಷ ನಾಯಕ ಡಾ.ಎಂ.ಆರ್.ಪೈ ವಿಷಯ ಪ್ರಸ್ತಾಪಿಸಿ, ವಿಶ್ವೇಶ್ವರಯ್ಯ ವಾಣಿಜ್ಯ ಸಂಕೀರ್ಣವನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸದೆ ಈಗಾಗಲೇ ಇದಕ್ಕಾಗಿ ಮೀಸಲಿರಿಸಿರುವ ಐದು ಕೋಟಿ ರೂ. ವೆಚ್ಚದಲ್ಲಿ ನಗರಸಭೆಯೇ ನಿರ್ಮಿಸಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಡಿ. ಮಂಜುನಾಥಯ್ಯ, 2010ರ ಸಾಮಾನ್ಯ ಸಭೆಯಲ್ಲಿ ಸರಕಾರದ ಅಧೀನ ಸಂಸ್ಥೆ ಐಡೆಕ್‌ನ ಸಹಭಾಗಿತ್ವದಲ್ಲಿ ಪಿಪಿಪಿ ಮಾದರಿಯಲ್ಲಿ ಈ ಕಟ್ಟಡವನ್ನು ನಿರ್ಮಿಸುವ ಬಗ್ಗೆ ನಿರ್ಣಯಿಸಲಾಗಿದೆ. ಇದರ ಅವಧಿ 30 ವರ್ಷಗಳಾಗಿದ್ದು, ಅದರ ನಂತರ ಖಾಸಗಿಯವರು ಈ ಕಟ್ಟಡವನ್ನು ನಗರಸಭೆಗೆ ಹಸ್ತಾಂತರಿಸಲಿದ್ದಾರೆ ಎಂದರು.
60 ಕೋ.ರೂ. ಆದಾಯ: ಯೋಜನೆಯ ಬಗ್ಗೆ ಸಭೆಗೆ ಸಂಕ್ಷಿಪ್ತ ಮಾಹಿತಿ ನೀಡಿದ ಪೌರಾಯುಕ್ತರು, ಇಲ್ಲಿರುವ 61 ಸೆಂಟ್ಸ್ ಜಾಗದಲ್ಲಿ 4.5 ಸೆಂಟ್ಸ್ ಜಾಗವನ್ನು ದೈವಸ್ಥಾನಕ್ಕೆ ನೀಡಿ, ಉಳಿದ ಜಾಗದಲ್ಲಿ ಮೂರು ಮಹಡಿಗಳ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು. ಸದ್ಯ ಇರುವ ಕಟ್ಟಡದಲ್ಲಿ ನಗರಸಭೆಗೆ 20.96 ಲಕ್ಷ ರೂ.ಆದಾಯ ಬರುತ್ತಿದೆ. ಹೊಸ ಕಟ್ಟಡವನ್ನು 12 ಕೋ.ರೂ. ವೆಚ್ಚದಲ್ಲಿ ಖಾಸಗಿಯವರು ನಿರ್ಮಿಸಿದ ಮೂರನೆ ವರ್ಷ (ಆರಂಭದ ಎರಡು ವರ್ಷ ಕಾಮಗಾರಿ ಅವಧಿ)ದಲ್ಲಿ 1.09 ಕೋ.ರೂ. ವಾರ್ಷಿಕ ಆದಾಯ ಬರುತ್ತದೆ. ಪ್ರತಿ ವರ್ಷ ಶೇ.5ರಷ್ಟು ಏರಿಕೆ ಮಾಡಿ ಕೊನೆಯ 30ನೆ ವರ್ಷದಲ್ಲಿ 4.97 ಕೋ.ರೂ. ಆದಾಯ ನಗರಸಭೆಗೆ ಸಿಗುತ್ತದೆ. ಒಟ್ಟು 28 ವರ್ಷಗಳಲ್ಲಿ 60 ಕೋಟಿ ರೂ. ದೊರೆಯಲಿದೆ ಎಂದು ತಿಳಿಸಿದರು.
ಈ ಯೋಜನೆಯನ್ನು ರೂಪಿಸಿದ್ದು ಬಿಜೆಪಿ ಆಡಳಿತ ಅವಧಿಯಲ್ಲಿ. ಈಗ ಅವರೇ ರಾಜಕೀಯ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕಾಮಗಾರಿಗೆ ಸಂಬಂಧಿಸಿದ ಎಲ್ಲ ನಿಯಮಗಳನ್ನು 2010ರಲ್ಲೇ ರೂಪಿಸಲಾಗಿದೆ ಎಂದು ಜನಾರ್ದನ ಭಂಡಾರ್ಕರ್ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯಶ್ಪಾಲ್ ಸುವರ್ಣ, 2012ಕ್ಕೂ ಈಗಿನ ಪರಿಸ್ಥಿತಿಗೂ ತುಂಬಾ ವ್ಯತ್ಯಾಸ ಗಳಿವೆ. ಅಲ್ಲದೆ ಇದರ ಯಾವುದೇ ಮಾಹಿತಿ ನಮಗೆ ನೀಡಿಲ್ಲ ಎಂದು ಆರೋಪಿಸಿದರು.
ನಾಯಿಗಳ ಸಂತಾನಹರಣ ಚಿಕಿತ್ಸೆ, ಆ್ಯಂಟಿ ರೇಬಿಸ್ ಲಸಿಕೆಗೆ 590 ರೂ.
ನಗರಸಭಾ ವ್ಯಾಪ್ತಿಯ ಬೀದಿನಾಯಿಗಳ ಸಂತಾನ ಹರಣ ಚಿಕಿತ್ಸೆ ಮತ್ತು ಆ್ಯಂಟಿ ರೇಬಿಸ್ ಲಸಿಕೆ ನೀಡುವ ಜವಾಬ್ದಾರಿಯನ್ನು ಮಹಾರಾಷ್ಟ್ರದ ಪುಣೆಯ ನಂದೆಡ್ ಸೊಸೈಟಿ ಫಾರ್ ಪ್ರಿವೇಶನ್ ಎಂಬ ಸಂಸ್ಥೆಗೆ ವಹಿಸಿಕೊಡಲಾಗಿದ್ದು, ಬೀದಿನಾಯಿಗಳ ಸರ್ವೇ ಕಾರ್ಯಕ್ಕೆ ಒಟ್ಟು 50 ಸಾವಿರ ರೂ. ನೀಡಲಾಗಿದೆ. ನಾಯಿಗಳ ಸರ್ವೇ ನಡೆಸಿದ ಬಳಿಕ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗದರ್ಶನದಂತೆ ಸಂತಾನಹರಣ ಚಿಕಿತ್ಸೆ ನೀಡಲಾಗುವುದು. ಪ್ರತಿ ನಾಯಿಗೆ 590 ರೂ. ಪಾವತಿ ಮಾಡಲಾಗುತ್ತದೆ ಎಂದು ಆರೋಗ್ಯ ಇಂಜಿನಿಯರ್ ರಾಘವೇಂದ್ರ ಸಭೆಗೆ ತಿಳಿಸಿದರು. ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಸಭೆಯಲ್ಲಿ ಒತ್ತಾಯ ಕೇಳಿಬಂತು. ಇದಕ್ಕಾಗಿ ರಾತ್ರಿ ಕಾರ್ಯಾಚರಿಸುವ ಕಾರ್ಯಪಡೆಯನ್ನು ರಚಿಸಬೇಕು ಎಂದು ವಿಜಯ ಮಂಚಿ ಸಲಹೆ ನೀಡಿದರು. ಶುಚಿತ್ವದಲ್ಲಿ ಉಡುಪಿಗೆ ಏಳನೆ ಸ್ಥಾನ ದೊರೆತಿದ್ದು, ಶುಚಿತ್ವಕ್ಕೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ರಮೇಶ್ ಕಾಂಚನ್ ಹೇಳಿದರು.
ಡಾ.ಎಂ.ಆರ್. ಪೈ ಮಾತನಾಡಿ, ನಗರದ ಒಳಚರಂಡಿ ವ್ಯವಸ್ಥೆ ಸಂಪೂರ್ಣ ವಿಫಲವಾಗಿದ್ದು, ಕಲ್ಸಂಕ ಸೇರಿದಂತೆ ಹಲವು ಭಾಗಗಳಲ್ಲಿ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿದರು. ಮಣಿಪಾಲದಲ್ಲಿ ಒಳಚರಂಡಿ ವ್ಯವಸ್ಥೆ ಮಾಡುವಾಗ ಟ್ರೀಟ್‌ಮೆಂಟ್ ಪ್ಲಾಂಟ್ ಮಾಡಬೇಕು. ಅದರ ಬಗ್ಗೆ ಸರಿಯಾಗಿ ಮಾಹಿತಿ ನೀಡಿ ಎಂದು ದಿನಕರ ಹೆರ್ಗ ಆಗ್ರಹಿಸಿದರು. ನಗರದ ಒಳಚರಂಡಿ ವ್ಯವಸ್ಥೆ ಹೊಸದಲ್ಲ. ಅದು ಪುರಸಭೆ ಇರುವಾಗ ಮಾಡಿದ್ದು ಎಂದು ಅಧ್ಯಕ್ಷರು ತಿಳಿಸಿದರು.







