ನ.7-8ಕ್ಕೆ ಎತ್ತಿನಹೊಳೆ ಅಂತಿಮ ವಿಚಾರಣೆ ಮುಂದೂಡಿಕೆ
ಮಂಗಳೂರು, ಸೆ.21: ದಿಲ್ಲಿಯ ಪ್ರಧಾನ ಹಸಿರು ಪೀಠಕ್ಕೆ ವರ್ಗಾ ವಣೆಗೊಂಡಿರುವ ಎತ್ತಿನಹೊಳೆ ಯೋಜನಾ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯು ನವೆಂಬರ್ 7 ಮತ್ತು 8ಕ್ಕೆ ಮುಂದೂಡಲ್ಪಟ್ಟಿದೆ. ಹೊಸದಿಲ್ಲಿಯ ಹಸಿರುಪೀಠದಲ್ಲಿ ಇಂದು ಯೋಜನಾ ವಿವಾದಕ್ಕೆ ಸಂಬಂಧಿಸಿ ವಿಚಾರಣೆ ಕೈಗೆತ್ತಿಕೊಳ್ಳಲಾಯಿತಾದರೂ, ಯೋಜನೆ ವಿವಾದಕ್ಕೆ ಸಂಬಂಧಿಸಿ ಅಗತ್ಯ ಆಕ್ಷೇಪಗಳು ಸಲ್ಲಿಕೆಯಾಗದಿರುವುದರಿಂದ ವಿಚಾರಣೆಯನ್ನು ಮುಂದೂಡಿದೆ.
ಇದೇ ವೇಳೆ ಹಸಿರು ಪೀಠವು ಎತ್ತಿನಹೊಳೆ ಯೋಜನಾ ಪ್ರದೇಶದಲ್ಲಿ ಮರ ಕಡಿಯದೆ ಯಥಾಸ್ಥಿತಿಯನ್ನು ಕಾಪಾಡುವಂತೆಯೂ ಕರ್ನಾಟಕ ಸರಕಾರ ಹಾಗೂ ರಾಜ್ಯದ ನೀರಾವರಿ ನಿಗಮಕ್ಕೆ ತಾಕೀತು ಮಾಡಿದೆ. ಎತ್ತಿನಹೊಳೆ ಯೋಜನಾ ವಿವಾದಕ್ಕೆ ಸಂಬಂಧಿಸಿದ ವಿಚಾ ರಣೆಯನ್ನು ಕೈಗೆತ್ತಿಕೊಂಡ ಹಸಿರುಪೀಠ, ಅರ್ಜಿದಾರರಾದ ಸೋಮಶೇಖರ್, ಯತಿರಾಜು ಹಾಗೂ ಕಿಶೋರ್ ಕುಮಾರ್ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿತು.
ಯೋಜನಾ ಪ್ರದೇಶದಲ್ಲಿ ಮರಗಳನ್ನು ಕಡಿಯದೆ ಯಥಾಸ್ಥಿತಿ ಕಾಪಾಡಬೇಕೆಂಬ ನ್ಯಾಯಪೀಠದ ಸೂಚನೆಯ ಕುರಿತಂತೆ, ಪ್ರತಿವಾದವನ್ನು ಮಂಡಿಸಿದ ಕೆಎನ್‌ಎನ್‌ಎಲ್ ಪರವಾದ ವಕೀಲರು, 2 ಹಂತದಲ್ಲಿ ಅರಣ್ಯ ಇಲಾಖೆ ಮರಗಳನ್ನು ಕಡಿಯಲು ಅನುಮತಿಯನ್ನು ನೀಡಿದೆ ಎಂದರು. ಇದನ್ನು ನಿರಾಕರಿಸಿದ ಸೋಮಶೇಖರ್ ಪರವಾದ ವಕೀಲರು, 3ನೆ ಹಂತದ ಅನುಮತಿಯನ್ನು ಪಡೆದ ಬಳಿಕ ಅದು ಗೆಜೆಟ್‌ನಲ್ಲಿ ಪ್ರಕಟವಾಗಬೇಕಿದೆ. ಆದರೆ ಈ ಎಲ್ಲಾ ನಿಯಮಗಳನ್ನು ಪಾಲನೆ ಮಾಡದಿರುವುದರಿಂದ ಮರಗಳನ್ನು ಕಡಿಯಲು ಅನುಮತಿ ನೀಡಬಾರದೆಂದು ವಾದಿಸಿದರು. ಇದಕ್ಕೆ ನ್ಯಾಯಪೀಠ ಸಮ್ಮತಿಸಿತು. ಅಲ್ಲದೆ ಈ ವಿವಾದಕ್ಕೆ ಸಂಬಂಧಿಸಿ ಇನ್ನು ಒಂದು ವಾರದೊಳಗೆ ಎಲ್ಲ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಬೇಕು. ತಪ್ಪಿದಲ್ಲಿ ಅಂತಿಮ ವಿಚಾರಣೆಯಲ್ಲಿ ಅದನ್ನು ಪರಿಗಣಿಸಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿರುವುದಾಗಿ ಅರ್ಜಿದಾರ ಸೋಮಶೇಖರ್ ತಿಳಿಸಿದ್ದಾರೆ.







