ಸುಬ್ರಹ್ಮಣ್ಯ ಕ್ಷೇತ್ರದ ಹುಂಡಿಯಿಂದ ಕಳವು ಪ್ರಕರಣ: ಆರೋಪಿ ದೇವಳದ ಸಿಬ್ಬಂದಿ ಸೆರೆ

ಸುಬ್ರಹ್ಮಣ್ಯ, ಸೆ.21: ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಎಣಿಕೆ ಸಂದರ್ಭ ಹಣ ಕಳವುಗೈದ ಆರೋಪಕ್ಕೆ ಸಂಬಂಧಿಸಿ ದೇವಸ್ಥಾನದ ನೌಕರ ಹಲ್ಕುರೆ ಗೌಡ ಎಂಬಾತನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಸೆ.15ರಂದು ಕುಕ್ಕೆ ದೇವಸ್ಥಾನದ ಆಡಳಿತ ಕಚೇರಿಯ ಹುಂಡಿ ಹಾಲ್‌ನಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯುತಿತ್ತು. ಈ ವೇಳೆ ದೇವಸ್ಥಾನದ ಸಿಬ್ಬಂದಿ ಹಲ್ಕುರೆ ಗೌಡ ಸ್ಥಳದಲ್ಲಿದ್ದು, ಈತನ ಚಲನವಲನ ಕುರಿತಂತೆ ಕೆಲವರಿಗೆ ಸಂಶಯ ಉಂಟಾಗಿತ್ತು.ಅದರಂತೆ ಕೊಠಡಿಗೆ ಅಳವಡಿಸಲಾದ ಸಿಸಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಹಲ್ಕುರೆ ಗೌಡ ನಾಲ್ಕು ಬಾರಿ ನೋಟುಗಳನ್ನು ತನ್ನ ಪ್ಯಾಂಟಿನ ಕಿಸೆಗೆ ತುಂಬಿಸುತ್ತಿದ್ದ ದೃಶ್ಯ ಕಂಡುಬಂದಿತ್ತು. ಈಬಗ್ಗೆ ದೇವಸ್ಥಾನದ ಸಿಇಒ ನೀಡಿದ ದೂರಿನಂತೆ ಪ್ರಕರಣ ಾಖಲಿಸಿ ಕೊಂಡ ಸುಬ್ರಹ್ಮಣ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಎಎಸ್ಪಿ ರಿಷ್ಯಂತ್ ಮಾರ್ಗದರ್ಶ ನದಲ್ಲಿ ಸುಳ್ಯ ವೃತ್ತ ನೀರಿಕ್ಷಕ ಕೃಷ್ಣಯ್ಯ ನೇತೃತ್ವದ ತಂಡ ವಿಚಾರಣೆ ನಡೆಸಿದಾಗ ಆರೋಪಿ ತಾನು ಹುಂಡಿ ಎಣಿಕೆ ವೇಳೆ ಹಣ ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಕಳವು ಮಾಡಿದ ಹಣವನ್ನು ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ ಮೇರೆಗೆ ಕಳವುಗೈದ ಹಣದಲ್ಲಿ 100 ರೂ ಮುಖಬೆಲೆಯ 33,300 ರೂ.ನ ನಾಲ್ಕು ಕಟ್ಟು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಸುಬ್ರಹ್ಮಣ್ಯ ಎಸ್ಸೈ ಗೋಪಾಲ್, ಎಎಸ್ಸೈ ಚಂದಪ್ಪ, ಸಿಬ್ಬಂದಿ ಚಂದ್ರಶೇಖರ ಯು., ಸಂಧ್ಯಾಮಣಿ, ನಾರಾಯಣ ಪಾಟಾಳಿ ಪಾಲ್ಗೊಂಡಿದ್ದರು.







