ಕ್ಯಾನ್ಸರ್ ರೋಗಿ ವೃದ್ಧೆಯ ಮೇಲೆ ಅತ್ಯಾಚಾರ
ಕೇರಳ, ಸೆ.21: ಕ್ಯಾನ್ಸರ್ ರೋಗಿಯಾಗಿದ್ದ 90 ವರ್ಷದ ವೃದ್ಧೆಯೋರ್ವಳ ಮೇಲೆ ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ದಕ್ಷಿಣ ಕೇರಳದ ಕೊಲ್ಲಂ ಬಳಿಯ ಕಡಕ್ಕಳ್ ಎಂಬಲ್ಲಿ ಸೆ.14ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 20 ವರ್ಷದ ಹಿಂದೆ ಪತಿಯ ಮರಣಾನಂತರ ಈ ಮಹಿಳೆ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದಳು. ಈಕೆಗೆ ಮಕ್ಕಳಿಲ್ಲ. ಸೆ.14ರ ರಾತ್ರಿ ವೇಳೆ ಈಕೆಯ ಮನೆಯ ಹಿಂಬಾಗಿಲನ್ನು ಒಡೆದು ಒಳನುಗ್ಗಿದ ಆರೋಪಿ ಚೂರಿ ತೋರಿಸಿ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಘಟನೆಯ ಬಗ್ಗೆ ಮರುದಿನ ಸಂಬಂಧಿಕರು ಮತ್ತು ನೆರೆಕರೆೆಯವರಿಗೆ ತಿಳಿಸಿದಾಗ ಅವರು ಸುಮ್ಮನಿರುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಸ್ಥಳೀಯ ಪಂಚಾಯತ್ ಸದಸ್ಯರಲ್ಲಿ ದೂರಿದಾಗಲೂ ಅವರು ಇದೇ ಮಾತನ್ನು ಆಡಿದ್ದಾರೆ ಎಂದು ಸಂತ್ರಸ್ತ ವೃದ್ಧೆ ತಿಳಿಸಿದ್ದಾರೆ. ಬಳಿಕ ಸ್ಥಳೀಯ ಸಾಮಾಜಿಕ ಕಾರ್ಯಕರ್ತೆಯೋರ್ವರು ಪೊಲೀಸರಿಗೆ ಘಟನೆಯ ಬಗ್ಗೆ ತಿಳಿಸಿದಾಗ ಅವರು ಎಚ್ಚರಗೊಂಡಿದ್ದರು ಎನ್ನಲಾಗಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗವು ಘಟನೆಯ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿದ್ದು ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಪೊಲೀಸರಿಗೆ ತಿಳಿಸಿದೆ. ಇದೇ ಪರಿಸರದಲ್ಲಿ ವಾಸವಾಗಿರುವ ವ್ಯಕ್ತಿಯೋರ್ವನನ್ನು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೆಸರಿಸಿದ್ದಾಳೆ. ಇದೀಗ ಆ ವ್ಯಕ್ತಿ ನಾಪತ್ತೆಯಾಗಿದ್ದು ಆತನ ವಿರುದ್ಧ ಐಪಿಸಿ ಸೆಕ್ಷನ್ 377 ಮತ್ತು 354ರಡಿ ಕೇಸು ದಾಖಲಿಸಲಾಗಿದೆ. ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡಿದ್ದು ಆರೋಪಿಯನ್ನು ಗುರುತಿಸಲಾಗಿದೆ. ಪ್ರಕರಣ ಮುಚ್ಚಿಹಾಕಲು ಯತ್ನಿಸಿದವರ ಮತ್ತು ಆಕೆಗೆ ಚಿಕಿತ್ಸೆ ನೀಡಲು ನಿರಾಕರಿಸಿದವರನ್ನು ವಿಚಾರಣೆ ಮಾಡಲಾಗುವುದು ಎಂದು ಕೊಲ್ಲಂ ಗ್ರಾಮಾಂತರ ಎಸ್‌ಪಿ ಅಜಿತ್ ಬೆಹ್ರಾ ತಿಳಿಸಿದ್ದು , ತನಿಖೆಯ ನಿಟ್ಟಿನಲ್ಲಿ ವಿಶೇಷ ತಂಡ ರಚಿಸುವಂತೆ ದಕ್ಷಿಣ ವಲಯ ಐಜಿ ಮನೋಜ್ ಅಬ್ರಹಾಂ ಅವರಿಗೆ ಸೂಚಿಸಿದ್ದಾರೆ.





