ವಾಟ್ಸ್‌ಆ್ಯಪ್ ಬಳಕೆದಾರರ ಗಮನಕ್ಕೆ
ವಾಟ್ಸ್ ಆಪ್ ನಿಂದ ಹೈಕೋರ್ಟ್ ಗೆ ಮಹತ್ವದ ಹೇಳಿಕೆ

ಹೊಸದಿಲ್ಲಿ, ಸೆ.22: ವಾಟ್ಸ್‌ಆ್ಯಪ್ ಬಳಕೆದಾರರು ಒಮ್ಮೆ ತಮ್ಮ ಖಾತೆಯನ್ನು ಕಿತ್ತುಹಾಕಿದ ಬಳಿಕ, ಅವರಿಗೆ ಸಂಬಂಧಿಸಿದ ಯಾವುದೇ ಮಾಹಿತಿಗಳನ್ನು ಉಳಿಸಿಕೊಳ್ಳುವುದಿಲ್ಲ ಎಂದು ವಾಟ್ಸ್‌ಆ್ಯಪ್ ದೆಹಲಿ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.
ಈ ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ಆಪ್, ಈ ಸಂಬಂಧ ದೆಹಲಿ ಹೈಕೋರ್ಟ್ ಕೇಳಿದ ಸ್ಪಷ್ಟನೆಗೆ ಈ ಉತ್ತರ ನೀಡಿದೆ. ಖಾತೆ ಡಿಲೀಟ್ ಆದ ಬಳಿಕ ಗ್ರಾಹಕರಿಗೆ ಸಂಬಂಧಿಸಿದ ಮಾಹಿತಿ ಏನಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟನೆ ಬಯಸಿತ್ತು.
ವಾಟ್ಸ್ ಅಪ್ ತನ್ನೆಲ್ಲ ಮಾಹಿತಿಯನ್ನು ಮೂಲ ಕಂಪೆನಿಯಾದ ಫೇಸ್‌ಬುಕ್ ಜತೆಗೆ ಹಂಚಿಕೊಳ್ಳಲು ನಿರ್ಧರಿಸಿದ ಹಿನ್ನೆಲೆಯಲ್ಲಿ, ದೆಹಲಿ ಮೂಲದ ಬಳಕೆದಾರರು ಹೈಕೋರ್ಟ್‌ನಲ್ಲಿ ಈ ಸಂಬಂಧ ಅರ್ಜಿ ಸಲ್ಲಿಸಿ, "ಈ ನಿರ್ಧಾರದಿಂದ ಬಳಕೆದಾರರ ಹಕ್ಕುಗಳ ವಿಚಾರದಲ್ಲಿ ರಾಜಿ ಮಾಡಿಕೊಂಡಂತಾಗಿದೆ" ಎಂದು ಆಕ್ಷೇಪಿಸಿದ್ದರು.
ಮುಖ್ಯ ನ್ಯಾಯಮೂರ್ತಿ ಜಿ.ರೋಹಿಣಿ ಹಾಗೂ ನ್ಯಾಯಮೂರ್ತಿ ಸಂಗೀತಾ ಧಿಂಗ್ರಾ ಸೆಹಗಲ್ ಅವರು ಈ ಅರ್ಜಿಯ ವಿಚಾರಣೆ ನಡೆಸಿದರು. ಆದರೆ ಖಾತೆ ಡಿಲೀಟ್ ಆದ ಬಳಿಕ ಆ ಮಾಹಿತಿಗಳು ಏನಾಗುತ್ತದೆ ಎಂಬ ವಿಷಯ ಹೊರತುಪಡಿಸಿ ಇತರ ಯಾವುದೇ ವಿಷಯಗಳ ವಿಚಾರಣೆ ನಡೆಸಲಿಲ್ಲ.





