'ತೆಂಡುಲ್ಕರ್ ನಿವೃತ್ತಿಯಾಗದೇ ಇರುತ್ತಿದ್ದರೆ ತಂಡದಿಂದ ಕೈಬಿಡುವ ಸಾಧ್ಯತೆಯಿತ್ತು'
ಸತ್ಯ ಬಿಚ್ಚಿಟ್ಟ ಮಾಜಿ ಮುಖ್ಯ ಆಯ್ಕೆಗಾರ ಸಂದೀಪ್ ಪಾಟೀಲ್

ಮುಂಬೈ, ಸೆ.22: ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ನಿವೃತ್ತಿಯಾಗದೇ ಇರುತ್ತಿದ್ದರೆ 2012ರಲ್ಲಿ ಭಾರತೀಯ ಏಕದಿನ ತಂಡದಿಂದ ಅವರನ್ನು ಕೈಬಿಡಲು ಯೋಚಿಸಲಾಗಿತ್ತು ಎಂದು ಮಾಜಿ ಮುಖ್ಯ ಆಯ್ಕೆಗಾರ ಸಂದೀಪ್ ಪಾಟೀಲ್ ಮರಾಠಿ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ಸತ್ಯ ಬಿಚ್ಚಿಟ್ಟಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಕಲೆ ಹಾಕಿರುವ ತೆಂಡುಲ್ಕರ್ ಡಿ.23,2012ರಲ್ಲಿ ಏಕದಿನ ಕ್ರಿಕೆಟ್‌ನಿಂದಲೂ, 2013ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. ತೆಂಡುಲ್ಕರ್ ನಿವೃತ್ತಿಯಾಗುವುದರ ಹಿಂದೆ ಆಯ್ಕೆಗಾರರ ಒತ್ತಡ ಕೆಲಸ ಮಾಡಿತ್ತು ಎಂದು ವರದಿಯಾಗಿತ್ತು.
ಡಿ.12,2012ರಲ್ಲಿ ನಾಗ್ಪುರದಲ್ಲಿ ಸಚಿನ್‌ರನ್ನು ಭೇಟಿಯಾಗಿ ಭವಿಷ್ಯದ ಯೋಜನೆಯ ಬಗ್ಗೆ ಕೇಳಿದ್ದೆ. ಆಗ ಅವರು ನಿವೃತ್ತಿಯಾಗುವ ಯೋಚನೆಯಿಲ್ಲ ಎಂದಿದ್ದರು. ಆದರೆ, ಸಚಿನ್‌ರನ್ನು ಕೈಬಿಡುವ ಬಗ್ಗೆ ಆಯ್ಕೆ ಸಮಿತಿ ಒಮ್ಮತದ ನಿರ್ಧಾರಕ್ಕೆ ಬಂದಿತ್ತು. ಈ ಕುರಿತು ಮಂಡಳಿಗೂ ಮಾಹಿತಿ ನೀಡಿತ್ತು. ಬಿಸಿಸಿಐ ಮುಂದಿನ ಸಭೆಯಲ್ಲಿ ಏನು ನಡೆಯಬಹುದು ಎಂದು ಬೇಗನೆ ಅರ್ಥ ಮಾಡಿಕೊಂಡ ತೆಂಡುಲ್ಕರ್ ತಕ್ಷಣವೇ ನಿವೃತ್ತಿ ನಿರ್ಧಾರಕ್ಕೆ ಬಂದರು. ಏಕದಿನದಿಂದ ನಿವೃತ್ತಿಯಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಗಮನಹರಿಸುವುದಾಗಿ ಆಯ್ಕೆ ಸಮಿತಿಗೆ ತಿಳಿಸಿದರು. ಆಗ ಅವರು ನಿವೃತ್ತಿಯಾಗದೇ ಇರುತ್ತಿದ್ದರೆ, ನಾವು ಖಂಡಿತವಾಗಿಯೂ ಅವರನ್ನು ಏಕದಿನ ತಂಡದಿಂದ ಕೈಬಿಡುತ್ತಿದ್ದೆವು ಎಂದು ಪಾಟೀಲ್ ತಿಳಿಸಿದರು.







