ಹೆಬ್ಬಾವನ್ನು ಕೊಂದು ಮಾಂಸ ಮಾಡಿದಾತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಕೇಸ್
ಆರೋಪಿ ಪರಾರಿ, ದ್ವಿಚಕ್ರ ವಾಹನ ವಶ

ಕಡಬ, ಸೆ.22: ವ್ಯಕ್ತಿಯೋರ್ವ ಹೆಬ್ಬಾವುವೊಂದನ್ನು ಕೊಂದು ಮಾಂಸ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿರುವ ಪಂಜ ವಲಯ ಅರಣ್ಯಾಧಿಕಾರಿಗಳು ದ್ವಿಚಕ್ರ ವಾಹನ ಹಾಗೂ ಹೆಬ್ಬಾವಿನ ಕಳೇಬರವನ್ನು ವಶಪಡಿಸಿಕೊಂಡ ಘಟನೆ ಇಂದು ನಡೆದಿದೆ. ಇದೇ ವೇಳೆ ಪ್ರಕರಣದ ಆರೋಪಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಕೋಡಿಂಬಾಳ ಸಮೀಪದ ನಾಕೂರು ಎಂಬಲ್ಲಿ ರೈಲ್ವೆ ಸೇತುವೆಯ ಅಡಿಭಾಗದಲ್ಲಿ ಈ ಪ್ರಕರಣ ನಡೆದಿದೆ. ಕೋಡಿಂಬಾಳ ಗ್ರಾಮದ ನಾಕೂರು ಮನೆ ನಿವಾಸಿ ಪಾರೆ ಪಾಪಚ್ಚ ಎಂಬವರ ಪುತ್ರ ಪಿ.ಜೆ.ಜೋಸೆಫ್ ತಲೆಮರೆಸಿಕೊಂಡಿರುವ ಆರೋಪಿ. ಈತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಕಲಂ 55ರ ಅನ್ವಯ ದೂರು ದಾಖಲಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ, ಪಂಜ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ಉಪವಲಯ ಅರಣ್ಯಾಧಿಕಾರಿಗಳಾದ ರಾಜೇಶ್, ಕೆ.ಜೆ.ಪ್ರಸಾದ್, ರವೀಂದ್ರ ಕೆ., ಅರಣ್ಯ ರಕ್ಷಕರಾದ ರವಿಚಂದ್ರ ಪಡುಬೆಟ್ಟು, ಭೀಮಪ್ಪ ಎಸ್.ಐ., ಅರಣ್ಯ ವೀಕ್ಷಕ ಜನಾರ್ಧನ ಡಿ.ಪಿ. ಪಾಲ್ಗೊಂಡಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ. ಹನುಮಂತಪ್ಪಮಾರ್ಗದರ್ಶನದಲ್ಲಿ ಮುಂದಿನ ತನಿಖೆ ನಡೆಯಲಿದೆ.





