ಇದು ಬರೇ ಗಾಳಿಯಿಂದ ಶುದ್ಧ ನೀರು ಉತ್ಪಾದಿಸುವ ಯಂತ್ರ !

ಇಸ್ರೇಲ್, ಸೆ.22: ವಾಟರ್ ಜೆನ್ ಎಂಬ ಹೆಸರಿನ ಇಸ್ರೇಲಿ ಕಂಪೆನಿಯೊಂದು ಬರೀ ಗಾಳಿಯಿಂದ ಶುದ್ಧ ನೀರು ಉತ್ಪಾದಿಸುವಯಂತ್ರವೊಂದನ್ನು ವಿನ್ಯಾಸಗೊಳಿಸಿದೆ. ವಸ್ತುಶಃ ಏನನ್ನೂ ಉಪಯೋಗಿಸದೆಯೇ ಶುದ್ಧ ಕುಡಿಯುವ ನೀರು ಉತ್ಪಾದಿಸುವ ವಾಟರ್ ಜನರೇಟರ್‌ಗಳನ್ನು ಈ ಕಂಪೆನಿ ಅಭಿವೃದ್ಧಿಪಡಿಸಿದೆ. ವಿವಿಧ ದಿಕ್ಕುಗಳಲ್ಲಿರುವ ಗಾಳಿಗಳನ್ನು ಒಟ್ಟಿಗೆ ಸೇರಿಸುವ ಪ್ಲಾಸ್ಟಿಕ್ ಎಲೆಗಳನ್ನು ಈ ವ್ಯವಸ್ಥೆ ಉಪಯೋಗಿಸುತ್ತದೆ.
‘‘ಕನಿಷ್ಠ ಇಂಧನ ಬಳಸಿ ಗಾಳಿಯಿಂದ ನೀರನ್ನು ಸಂಗ್ರಹಿಸುವ ಪ್ರಯತ್ನ ಇದಾಗಿದೆ’’ ಎಂದು ಕಂಪೆನಿಯ ಸಹ ಸಿಇಒ ಹಾಗೂ ಸ್ಥಾಪಕ ಆರ್ಯೆ ಕೊಹವಿ ಹೇಳಿದ್ದಾರೆ. ಇದು ನೀರಿನ ಸಮಸ್ಯೆಗೆ ತಕ್ಷಣದ ಪರಿಹಾರವಾಗಿದೆ. ಸರಕಾರಗಳು ದೊಡ್ಡ ದೊಡ್ಡ ಯೋಜನೆಗಳಿಗೆ ಹಣ ವ್ಯಯಿಸಬೇಕಾಗಿಲ್ಲವೆಂದು ಅವರು ಹೇಳುತ್ತಾರೆ.
ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ತಾಂತ್ರಿಕ ಅನ್ವೇಷಣೆಗಳನ್ನು ಪ್ರಸುತಪಡಿಸುವ ಏಳು ಇಸ್ರೇಲಿ ಕಂಪೆನಿಗಳಲ್ಲಿ ವಾಟರ್ ಜೆನ್ ಒಂದಾಗಿದೆ. ಪ್ರಸ್ತುತ ಈ ಕಂಪೆನಿ ಮೂರು ಗಾತ್ರದ ನೀರು ಉತ್ಪಾದಿಸುವ ವಿದ್ಯುತ್ ಚಾಲಿತ ಯಂತ್ರಗಳನ್ನು ತಯಾರಿಸಿದೆ. ತಾಪಮಾನ 80 ಡಿಗ್ರಿ ಹಾಗೂ ಶೇ.60 ತೇವಾಂಶವಿದ್ದರೆ ಈ ಯಂತ್ರ ದಿನವೊಂದಕ್ಕೆ 825 ಗ್ಯಾಲನ್ ನೀರು ಉತ್ಪಾದಿಸುತ್ತದೆ. ಕಂಪೆನಿಯ ಮಧ್ಯಮ ಗಾತ್ರದ ಯಂತ್ರಗಳು ದಿನವೊಂದಕ್ಕೆ 18 ಗ್ಯಾಲನ್ ನೀರು ಉತ್ಪಾದಿಸಿದರೆ ಸಣ್ಣ ಆಫೀಸು ಅಥವಾ ಮನೆಯಲ್ಲಿ ಬಳಸಬಹುದಾದ ಅತೀ ಸಣ್ಣ ಯಂತ್ರವು ದಿನವೊಂದಕ್ಕೆ4 ಗ್ಯಾಲನ್‌ಗಿಂತ ಸ್ವಲ್ಪ ಕಡಿಮೆ ನೀರು ಉತ್ಪಾದಿಸುತ್ತದೆ.
ಈಗಿನ ದರಗಳನ್ನು ಗಮನಿಸಿದಾಗ ಈ ಯಂತ್ರದ ಮುಖಾಂತರಉತ್ಪಾದಿಸಲಾಗುವ ಪ್ರತಿ ಗ್ಯಾಲನ್ ನೀರಿಗೆ 10 ಸೆಂಟ್ಸ್ ವೆಚ್ಚ ತಗಲುವುದು ಎಂದು ಕಂಪೆನಿ ಹೇಳಿಕೊಂಡಿದೆ.
ಕುಡಿಯುವ ನೀರು ಲಭ್ಯವಿಲ್ಲದ ಪ್ರದೇಶಗಳು ಹಾಗೂ ಹೆಚ್ಚು ಉಷ್ಣಾಂಶ ಹಾಗೂ ತೇವಾಂಶವಿರುವ ಪ್ರದೇಶಗಳಲ್ಲಿಈ ಯಂತ್ರಗಳನ್ನು ಸ್ಥಾಪಿಸುವ ಉದ್ದೇಶ ಕಂಪೆನಿಗಿದೆ.
ತನ್ನ ಉತ್ಪನ್ನಗಳ ಪ್ರಾಯೋಗಿಕ ಪರೀಕ್ಷೆಯನ್ನು ಕಂಪೆನಿಯು ಮುಂಬೈ, ಶಾಂಘಾಯಿ ಹಾಗೂ ಮೆಕ್ಸಿಕೋ ಪಟ್ಟಣಗಳು ಹಾಗೂ ಇತರ ಗ್ರಾಮೀಣ ಪ್ರದೇಶಗಳಲ್ಲಿ ನಡೆಸುತ್ತಿದೆ.ಮುಂದಿನ ವರ್ಷ ಅದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆಯೆಂದು ತಿಳಿದು ಬಂದಿದೆ.
ನೀರು ಉತ್ಪಾದಕಾ ಯಂತ್ರಗಳನ್ನು ಹೊರತುಪಡಿಸಿ ಈ ಕಂಪೆನಿ ನೀರು ಪ್ಯೂರಿಫೈಯರ್‌ಗಳನ್ನೂ ಉತ್ಪಾದಿಸುತ್ತಿದ್ದು ಇವುಗಳು ಬ್ಯಾಟರಿ ಅಥವಾ ಸೋಲಾರ್ ಪ್ಯಾನೆಲ್ ಮೂಲಕ ಕಾರ್ಯನಿರ್ವಹಿಸುತ್ತವೆ.





