ಉಡುಪಿ: ಮರಳು ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಧರಣಿ

ಉಡುಪಿ, ಸೆ.22: ಉಡುಪಿ ಜಿಲ್ಲೆಯಲ್ಲಿ ಮರಳಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಸರ್ವ ಸಂಘಟನೆಗಳ ಮರಳಿಗಾಗಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಯ 29 ವಿವಿಧ ಸಂಘಟನೆಗಳು ಕಾಲ್ನಾಡಿಗೆ ಜಾಥ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಧರಣಿ ನಡೆಸಿದವು.
ಉಡುಪಿ ನಗರದ ಜೋಡುಕಟ್ಟೆಯಿಂದ ಆರಂಭಗೊಂಡ ಕಾಲ್ನಡಿಗೆ ಜಾಥವು ಕೆಎಂ ಮಾರ್ಗ, ಸರ್ವಿಸ್, ಸಿಟಿ ಬಸ್ ನಿಲ್ದಾಣ, ಕಲ್ಸಂಕ ಮಾರ್ಗ ವಾಗಿ ರಾಯಲ್‌ಗಾರ್ಡನ್‌ವರೆಗೆ ನಡೆಯಿತು. ಇದರಲ್ಲಿ ಸಾವಿರಾರು ಸಂಖ್ಯೆಯ ಮರಳುಗಾರಿಕೆ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಇಂಜಿನಿಯರ್ಸ್, ಬಿಲ್ಡರ್ಸ್‌ಗಳು, ಗುತ್ತಿಗೆದಾರರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.
ಅಲ್ಲಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿವರೆಗೆ ವಾಹನ ಜಾಥ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಭೆ ನಡೆಸಲಾಯಿತು. ಸಮಿತಿಯ ಪ್ರಮುಖ ಕುತ್ಯಾರ್ ಪ್ರಸಾದ್ ಮಾತನಾಡಿ, ನಾನ್ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಈಗಾಗಲೇ ಮಾಡಿರುವ ಟೆಂಡರ್ ಪದ್ಧತಿಯ ಪ್ರಸ್ತಾವನೆಯನ್ನು ಕೈಬಿಟ್ಟು ಸಾಂಪ್ರದಾಯಿಕ ಮರಳುಗಾರಿಕೆಗೆ ಅನುಮತಿ ನೀಡಬೇಕು. ಉಡುಪಿ ಜಿಲ್ಲೆಯಿಂದ ಹೊರ ಜಿಲ್ಲೆ/ರಾಜ್ಯಗಳಿಗೆ ಮರಳು ಸಾಗಾಟಕ್ಕೆ ಅನುಮತಿ ನೀಡಬಾರದು ಎಂದರು.
ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ಸಂಬಂಧ ಚೈನ್ನೈಯ ಹಸಿರು ಪೀಠ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಬೇಕಾಗಿರುವ ಕಾನೂನು ಉಪಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು. ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿಗೆ ಸಂಬಂಧಿಸಿ ನಿಯಮಾವಳಿ ರೂಪಿಸುವ ಸಮಿತಿಯಲ್ಲಿ ನಮ್ಮ ಸಮಿತಿಗೆ ಪ್ರಾತಿನಿಧ್ಯ ನೀಡಬೇಕು. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮರಳಿಗೆ ಸಮಾನ ದರ ನಿರ್ಧಾರ ಆಗಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲೆಯ ಮರಳಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಆಡಳಿತ ಪಕ್ಷ ಮಾತ್ರ ವಲ್ಲ ವಿರೋಧ ಪಕ್ಷಗಳೂ ಕೂಡ ಸಂಪೂರ್ಣ ವಿಫಲವಾಗಿವೆ. ಜಿಲ್ಲೆಯ ಮರಳಿ ಸಮಸ್ಯೆಯನ್ನು ಒಂದು ವಾರದೊಳಗೆ ಬಗೆಹರಿಸದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪ್ರತಿಭಟನಕಾರರಿಂದ ಮನವಿಯನ್ನು ಸ್ವೀಕರಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಶಿರೂರು ಶ್ರೀಲಕ್ಷ್ಮೀವರತೀರ್ಥ ಸ್ವಾಮೀಜಿ, ವಿವಿಧ ಸಂಘಟನೆಗಳ ಪ್ರಮುಖರಾದ ಎಂ.ಜಿ.ನಾಗೇಂದ್ರ, ನಾಗೇಶ್ ಹೆಗ್ಡೆ, ಜೆರ್ರಿ ವಿನ್ಸೆಂಟ್ ಡಯಾಸ್, ಮನೋಹರ್ ಶೆಟ್ಟಿ, ಬಿ.ಬಿ.ಪೂಜಾರಿ, ವಿಜಯ ಕುಮಾರ್ ಹೆಗ್ಡೆ, ಜನನಿ ದಿವಾಕರ ಶೆಟ್ಟಿ, ಕೃಷ್ಣ ಹೆಬ್ಬಾರ್, ರವಿ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ, ಅನ್ಸಾರ್ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.
ತಡೆಯಾಜ್ಞೆ ತೆರವಿಗೆ ದಾಖಲೆ ಸಲ್ಲಿಕೆ: ಡಿಸಿ
ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಒಟ್ಟು 170 ಮಂದಿಗೆ ಮರಳುಗಾರಿಕೆ ಕೊಡಲಾಗಿದೆ. ಅದರ ವಿರುದ್ಧ ಚೈನ್ನೈ ಹಸಿರು ಪೀಠದಿಂದ ತಡೆಯಾಜ್ಞೆ ತರ ಲಾಗಿದೆ. ಇದನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಸರಕಾರಿ ವಕೀಲರಿಗೆ ಎಲ್ಲ ರೀತಿಯ ದಾಖಲೆಗಳನ್ನು ಜಿಲ್ಲಾಡಳಿತದಿಂದ ಒದಗಿಸಲಾಗಿದೆ. ಇದರ ಮುಂದಿನ ವಿಚಾರಣೆಯು ಅ.1ಕ್ಕೆ ನಡೆಯಲಿದೆ. ಇದಕ್ಕೆ ಪೂರಕವಾಗಿ ಸೇರ್ಪಡೆ ಅರ್ಜಿಯನ್ನು ಸಲ್ಲಿಸಿ ಸಮರ್ಥ ವಕೀಲರನ್ನು ನೇಮಿಸಿ ವಾದ ಮಂಡಿಸುವಂತೆ ಸಮಿತಿಯವರಿಗೆ ಸಲಹೆ ನೀಡಿದ್ದೇನೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ನಾನ್ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ 11 ದಿಬ್ಬಗಳನ್ನು ಲೋಕೋಪಯೋಗಿ ಇಲಾಖೆಯವರು ರಾಜ್ಯ ಸರಕಾರದ ನಿಯಮಾವಳಿಯಂತೆ ಟೆಂಡರ್ ಕರೆದಿದ್ದು, ಅದರಲ್ಲಿ 4 ದಿಬ್ಬಗಳನ್ನು ಮೀಸಲಾತಿ ಆಧಾರದಲ್ಲಿ ಎಸ್‌ಸಿ- ಎಸ್‌ಟಿ ಯವರಿಗೆ ವಹಿಸಿ, ಕಾರ್ಯ ಆದೇಶ ನೀಡುವಾಗ ಅದಕ್ಕೂ ಹೈಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದೆ. ಪ್ರತ್ಯೇಕ ಮರಳು ನೀತಿ ರಚಿಸಿ, ಟೆಂಡರ್ ಮಾಡದೆ ನೇರವಾಗಿ ಸಾಂಪ್ರಾದಾಯಿಕ ಮರಳುಗಾರಿಕೆ ನೀಡ ಬೇಕೆಂಬುದು ಅವರ ಬೇಡಿಕೆಯಾಗಿದೆ. ಮರಳುಗಾರಿಕೆ ಸಂಬಂಧ ಸೆ.25ರಂದು ಬೆಂಗಳೂರಿನಲ್ಲಿ ಕರೆಯಲಾದ ಸಭೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ರಚಿಸುವ ಕುರಿತು ಚರ್ಚೆ ನಡೆಸಲಾಗುವುದು ಎಂದರು.
ನಾನ್ ಸಿಆರ್‌ಝೆಡ್ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮೀಸಲಿರಿಸಿರುವ ಎರಡು ಮರಳು ದಿಬ್ಬಗಳಲ್ಲಿ ಒಂದನ್ನು ಸರಕಾರಿ ಯೋಜನೆಗಳ ಕಾಮಗಾರಿಗೆ ನೀಡಲಾಗುವುದು. ಪಟ್ಟಾ ಜಾಗದಲ್ಲಿ ಮರಳು ಗಾರಿಕೆ ನಡೆಸಲು ಅವಕಾಶವಿದ್ದರೂ ಜಿಲ್ಲೆಯಲ್ಲಿ ಅಂತಹ ಸ್ಥಳ ದೊರೆತಿಲ್ಲ. ಎಂ ಸ್ಯಾಂಡ್‌ಗೆ ನಾಲ್ಕು ಅರ್ಜಿ ಬಂದಿದ್ದು, ಅದಕ್ಕೆ ಮಂಜೂರಾತಿ ನೀಡಲಾಗುವುದು ಎಂದು ಅವರು ಹೇಳಿದರು.







