ವಿದೇಶದಿಂದ ವಾಚ್‌ಗಳ ಕಳ್ಳಸಾಗಾಟ: 14 ವರ್ಷಗಳ ಬಳಿಕ ಆರೋಪಿ ಸೆರೆ

ಕಾಸರಗೋಡು, ಸೆ.22: ವಿದೇಶದಿಂದ ಬೆಲೆಬಾಳುವ ವಾಚ್‌ಗಳನ್ನು ಕಳ್ಳಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಉದುಮ ಒರವಂಕರದ ನಿವಾಸಿ ಶಾಫಿ ಮುಹಮ್ಮದ್ (48) ಎಂದು ಗುರುತಿಸಲಾಗಿದೆ. ಈತನನ್ನು ಮುಂಬೈ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ.
2002ರ ಅಕ್ಟೊಬರ್ 15ರಂದು ಘಟನೆ ನಡೆದಿತ್ತು. ವಿದೇಶದಿಂದ ಕಳವುಗೈದು ಸಾಗಾಟ ಮಾಡುತ್ತಿದ್ದ ಸುಮಾರು ನಾಲ್ಕು ಸಾವಿರದಷ್ಟು ವಾಚ್‌ಗಳ ಸಹಿತ ಶಾಫಿ ಮುಹಮ್ಮದ್‌ನನ್ನು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದರು. ಅಂದು ನ್ಯಾಯಾಂಗ ಬಂಧನ ಅನುಭವಿಸಿ ಜೈಲಿನಿಂದ ಬಿಡುಗಡೆಗೊಂಡಿದ್ದ ಈತ ತಲೆಮರೆಸಿಕೊಂಡಿದ್ದ. ಹಲವು ಬಾರಿ ವಾರಂಟ್ ಕಳುಹಿಸಿದ್ದರೂ ಈತ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಮುಂಬೈ ನ್ಯಾಯಾಲಯ ಈತನನ್ನು ತಲೆಮರೆಸಿಕೊಂಡಿದ್ದ ಆರೋಪಿ ಎಂದು ಘೋಷಿಸಿತ್ತು.
ಬಳಿಕ ಈತನ ವಿರುದ್ಧ ಕೊಫೆ ಫೋಸಾ ಮೊಕದ್ದಮೆ ಹೂಡಲಾಗಿತ್ತು. ಈತನ ಪತ್ತೆಗೆ ಮುಂಬೈ ಕಸ್ಟಮ್ಸ್ ಕಾಸರಗೋಡು ಪೊಲೀಸರ ನೆರವನ್ನು ಕೋರಿದ್ದರು.
ಇದರಂತೆ ಆರೋಪಿಯನ್ನು ಹಿಡಿಯುವಲ್ಲಿ ಹೊಸದುರ್ಗ ಪೊಲೀಸರು ಯಶಸ್ವಿಯಾಗಿದ್ದಾರೆ.





