ವೇಶ್ಯಾವಾಟಿಕೆಯ ದಂಧೆ : ಮೋದಿ ಸಂಪುಟ ಸಚಿವನ ವಿರುದ್ಧ ಗಂಭೀರ ಆರೋಪ ಮಾಡಿದ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ

ಹೊಸದಿಲ್ಲಿ,ಸೆ.22: ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ದಿಲ್ಲಿಯ ಜಿ.ಬಿ.ರೋಡ್ ಪ್ರದೇಶದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ವೇಶ್ಯಾವಾಟಿಕೆ ದಂಧೆಯಲ್ಲಿ ನರೇಂದ್ರ ಮೋದಿ ಸರಕಾರದ ಸಚಿವರೋರ್ವರು ಪಾಲ್ಗೊಂಡಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಿರುವುದಾಗಿ ಜನತಾ ಕಾ ರಿಪೋರ್ಟ್‌ರ್ ಜಾಲತಾಣವು ವರದಿ ಮಾಡಿದೆ.
ದಿಲ್ಲಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲಿವಾಲ್, ಸಾವಿರಾರು ಕೋಟಿ ರೂ.ವಹಿವಾಟಿನ ವೇಶ್ಯಾವಾಟಿಕೆ ಜಾಲ ವರ್ಷಗಳಿಂದಲೂ ಸರಾಗವಾಗಿ ನಡೆಯುತ್ತಿರುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳಲು ತಾನು ಪ್ರಯತ್ನಿಸುತ್ತಿದ್ದೇನೆ. ಜಿ.ಬಿ.ರೋಡಿನಲ್ಲಿ ಪ್ರತಿದಿನ ಕನಿಷ್ಠ ಐದು ಕೋ.ರೂ.ಗಳ ವೇಶ್ಯಾವಾಟಿಕೆ ವಹಿವಾಟು ನಡೆಯುತ್ತಿದೆ. ಕೇಂದ್ರ ಸರಕಾರದ ಓರ್ವ ಸಚಿವ ಮತ್ತು ದಿಲ್ಲಿಯಲ್ಲಿರುವ ದೇಶದ ಪ್ರಮುಖ ರಾಜಕೀಯ ಪಕ್ಷವೊಂದರ ನಾಯನ ಆಶ್ರಯದಲ್ಲಿ ಈ ದಂಧೆ ನಡೆಯುತ್ತಿದೆ ಎಂಬ ನಂಬಲರ್ಹ ಮಾಹಿತಿ ತನ್ನ ತನಿಖೆಯ ವೇಳೆ ಲಭಿಸಿದೆ ಎಂದರು. ಸಂಸತ್ತಿನಿಂದ ಕೇವಲ ಮೂರು ಕಿ.ಮೀ.ಅಂತರದಲ್ಲಿ ನಡೆಯುತ್ತಿರುವ ಈ ವೇಶ್ಯಾವಾಟಿಕೆ ಜಾಲದ ಅಸಲಿ ರೂವಾರಿಗಳ ಪತ್ತೆಗಾಗಿ ತಾನು ಪ್ರಯತ್ನಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾಗಿ ಜಾಲತಾಣವು ಹೇಳಿದೆ.
ತಾನು ತನಿಖೆಯನ್ನು ಇನ್ನೇನು ಪೂರ್ಣಗೊಳಿಸಿ ಜಾಲದ ಹಿಂದಿರುವ ನಿಜವಾದ ಶಕ್ತಿಗಳನ್ನು ಪತ್ತೆ ಹಚ್ಚುವುದರಲ್ಲಿದ್ದಾಗಲೇ ತನ್ನ ವಿರುದ್ಧ ಸುಳ್ಳು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಕೇಂದ್ರ ಸರಕಾರವು ಉಪ ರಾಜ್ಯಪಾಲರ ಕಚೇರಿಯ ಮೂಲಕ ತನ್ನನ್ನು ಬಂಧಿಸಿ, ತನ್ನನ್ನು ಹುದ್ದೆಯಿಂದ ವಜಾಗೊಳಿಸಲಿದೆ ಎಂಬ ಸಂದೇಶಗಳೀಗ ತನಗೆ ಬರುತ್ತಿವೆ ಎಂದು ಮಲಿವಾಲ್ ದೂರಿದರು.
ವೇಶ್ಯಾವಾಟಿಕೆಯು ಕೊಳಕು ವೃತ್ತಿಯಾಗಿದೆ, 8-10 ವರ್ಷ ಪ್ರಾಯದ ಎಳೆಯ ಬಾಲಕಿಯರನ್ನೂ ಬಿಡದೆ ಅತ್ಯಾಚಾರವೆಸಗಿ ಮಾರಾಟ ಮಾಡಲಾಗುತ್ತಿದೆ ಎಂದ ಅವರು, ಯುವತಿಯೋರ್ವಳು ಪ್ರತಿ ರಾತ್ರಿ ಕನಿಷ್ಠ 30 ಪುರುಷರೊಂದಿಗೆ ಮಲಗುವಂತೆ ಬಲವಂತಗೊಳಿಸಲಾಗುತ್ತಿದೆ ಎಂದರು.
ಮಹಿಳಾ ಆಯೋಗದಲ್ಲಿ ನೇಮಕಾತಿಗಳಲ್ಲಿ ಅಕ್ರಮಗಳ ಆರೋಪದಲ್ಲಿ ದಿಲ್ಲಿಯ ಭ್ರಷ್ಟಾಚಾರ ನಿಗ್ರಹ ದಳವು ಮಲಿವಾಲ್ ವಿರುದ್ಧ ಎಫ್‌ಆರ್ ದಾಖಲಿಸಿಕೊಂಡಿದೆ. ಹಲವಾರು ಆಪ್ ಬೆಂಬಲಿಗರಿಗೆ ಸೂಕ್ತ ಅರ್ಹತೆಯಿಲ್ಲದಿದ್ದರೂ ಆಯೋಗದಲ್ಲಿ ಒಳ್ಳೆಯ ಹುದ್ದೆಗಳನ್ನು ನೀಡಲಾಗಿದೆ ಎಂದು ದೂರು ಸಲ್ಲಿಸಿರುವ ಆಯೋಗದ ಮಾಜಿ ಅಧ್ಯಕ್ಷೆ ಬರ್ಖಾ ಶುಕ್ಲಾ ಸಿಂಗ್ ಆರೋಪಿಸಿದ್ದಾರೆ.







