ಕಾವೇರಿ ವಿವಾದ ಬಗೆಹರಿಸಲು ಬಿಜೆಪಿ ನಿರಾಸಕ್ತಿ: ಸಚಿವ ಖಾದರ್
.jpg)
ಮಂಗಳೂರು, ಸೆ.22: ಕಾವೇರಿ ನದಿ ನೀರಿನ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿ ಕರೆದ ಸರ್ವಪಕ್ಷಗಳ ಸಭೆಗೆ ಬಿಜೆಪಿ ಸದಸ್ಯರು ಹಾಜರಾಗದಿರುವುದು ಬೇಸರದ ವಿಷಯ. ರಾಜ್ಯದ ಸಮಸ್ಯೆ ಎದುರಿಸಲು ಪಕ್ಷಾತೀತವಾಗಿ ಒಗ್ಗಟ್ಟನ್ನು ಪ್ರದರ್ಶಿಸುವ ಬದಲು ಬಿಜೆಪಿ ಭಾಗವಹಿಸದೆ ಇರುವುದು ದುರಾದೃಷ್ಟಕರ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಾಜ್ಯದ ಜನರ ಸಮಸ್ಯೆ ಪರಿಹರಿಸುವಲ್ಲಿ ಬಿಜೆಪಿ ಶಾಸಕರು, ಸಂಸದರು ನಿರಾಸಕ್ತರಾಗಿದ್ದಾರೆ. ಆ ಕಾರಣದಿಂದ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸುವ ಆಸಕ್ತಿಯನ್ನು ತೋರಿಸಿಲ್ಲ. ರಾಜ್ಯದ ಬಿಜೆಪಿ ಸಂಸದರು ಕೇಂದ್ರ ಸರಕಾರದ ಮೂಲಕ ಸಮಸ್ಯೆ ಬಗೆಹರಿಸುವ ಬಗ್ಗೆ ಪ್ರಯತ್ನವನ್ನು ಮಾಡಿಲ್ಲ. ಪ್ರಧಾನಿಯೂ ಎರಡೂ ರಾಜ್ಯಗಳ ಮುಖ್ಯ ಮಂತ್ರಿಗಳನ್ನು ಕರೆದು ಈ ಬಗ್ಗೆ ಸಮಸ್ಯೆ ಬಗೆಹರಿಸುವ ಸಮಾಲೋಚನೆಯನ್ನು ಮಾಡಿಲ್ಲ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.
ಕಾವೇರಿ ನದಿ ನೀರಿನ ಸಮಸ್ಯೆಯ ಬಗ್ಗೆ ಶುಕ್ರವಾರ ತುರ್ತು ಅಧಿವೇಶನ ಕರೆಯಲಾಗಿದೆ. ಈ ಅಧಿವೇಶನದಲ್ಲಿ ರಾಜ್ಯದ ಜನರ ಹಿತದೃಷ್ಟಿಯಿಂದ ಮುಂದೆ ಕೈ ಗೊಳ್ಳಬಹುದಾದ ಕ್ರಮಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಉಗ್ರರ ದಾಳಿಯನ್ನು ಖಂಡಿಸಿರುವ ಸಚಿವ ಯು.ಟಿ.ಖಾದರ್ ಈ ಬಗ್ಗೆ ದೇಶದ ಪ್ರಧಾನಿ ಹೇಳಿರುವಂತೆ ‘ತಕ್ಕ ಉತ್ತರ’ ಏಕೆ ನೀಡುತ್ತಿಲ್ಲ.ಅಧಿಕಾರ ಇಲ್ಲದೆ ಇದ್ದಾಗ ಉಗ್ರರ ಬಗ್ಗೆ ಹೇಳುತ್ತಿದ್ದ ಮಾತುಗಳ ಪ್ರಕಾರ ಈಗ ಏಕೆ ಪ್ರಧಾನಿ ನಡೆದುಕೊಳ್ಳುತ್ತಿಲ್ಲ ಎಂದು ಸಚಿವ ಖಾದರ್ ಟೀಕಿಸಿದರು.
ಜನವರಿ ತಿಂಗಳಲ್ಲಿ ಪಡಿತರ ಅಂಗಡಿಗಳಲ್ಲಿ ಅಯೋಡೈಸ್ಡ್ ಉಪ್ಪು ವಿತರಣೆ
ಜನರು ಅಯೋಡಿನ್ ಕೊರತೆಯ ಉಪ್ಪನ್ನು ಸೇವಿಸುವುದರಿಂದಾಗುವ ಸಮಸ್ಯೆ ನಿವಾರಿಸಲು ಮುಂದಿನ ಜನವರಿ ತಿಂಗಳ ಮೊದಲ ವಾರದಲ್ಲಿ ಪಡಿತರ ವಿತರಣೆಯ ಅಂಗಡಿಗಳಲ್ಲಿ ಅಯೋಡಿನ್‌ಯುಕ್ತವಾದ ಉಪ್ಪನ್ನು ಪಡಿತರ ಸಾಮಾಗ್ರಿಗಳನ್ನು ವಿತರಿಸುವ ಅಂಗಡಿಗಳಲ್ಲಿ ನೀಡಲಾಗುವುದು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದರು.
ಪಡಿತರ ಸಾಮಗ್ರಿಗಳನ್ನು ಪಡೆಯಲು ಕೂಪನ್ ಪದ್ಧತಿ ಜಾರಿಯಾದ ಬಳಿಕ ಮೊಬೈಲ್ ಮೂಲಕ ಆಧಾರ್ ಸಂಖ್ಯೆಯನ್ನು ಜೋಡಿಸಿ ಪಡಿತರ ಸಾಮಗ್ರಿಗಳ ಕೂಪನ್ ಪಡೆಯುವ ಸೌಲಭ್ಯವನ್ನು ಗ್ರಾಹಕರಿಗೆ ಕಲ್ಪಿಸಲಾಗಿದೆ. ಪಡಿತರ ಚೀಟಿಯಲ್ಲಿ ಆಧಾರ್ ಜೋಡಿಸದೆ ಇರುವ ಸದಸ್ಯರನ್ನು ಬಯೋಮೆಟ್ರಿಕ್ ದಾಖಲಿಸಿ ಪಡಿತರ ಚೀಟಿಯಲ್ಲಿ ಹೆಸರು ಸೇರಿಸಿ ಪಡಿತರ ಸಾಮಾಗ್ರಿಗಳನ್ನು ಪಡೆಯಬಹುದಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.







