ಕಾವೇರಿ ವಿಚಾರದಲ್ಲಿ ಬಿಜೆಪಿಯ ಬಣ್ಣ ಬಯಲು: ಪುತ್ತೂರು ನಗರ ಕಾಂಗ್ರೆಸ್

ಪುತ್ತೂರು, ಸೆ.22: ಕಾವೇರಿ ವಿವಾದಕ್ಕೆ ಸಂಬಂಧಿಸಿ ಗೊಂದಲ, ಹಲ್ಲೆ, ಆತ್ಮಹತ್ಯೆ ಘಟನೆಗಳಿಗೆ ಬೆಂಬಲ ನೀಡಿದ ಬಿಜೆಪಿಗರು ಸರ್ವಪಕ್ಷ ಸಭೆಗೆ ಹಾಜರಾಗದೆ ದೂರ ಉಳಿದಿರುವುದರಿಂದ ಅವರ ಇಬ್ಬಗೆ ನೀತಿಯ ಬಂಡವಾಳ ಹೊರಬಿದ್ದಿದೆ. ಜನರನ್ನು ತಪ್ಪುದಾರಿಗೆ ಎಳೆಯುವ ಬಿಜೆಪಿಗರ ನಾಟಕ ಇದರಿಂದಾಗಿ ಜಗಜ್ಜಾಹೀರಾಗಿದೆ ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಆರೋಪಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನದಿ ನೀರು ವಿಚಾರದಲ್ಲಿ ಕಾಂಗ್ರೆಸ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸುತ್ತಿರುವ ಬಿಜೆಪಿಗರು ಸರ್ವಪಕ್ಷ ಸಭೆಗೆ ಹಾಜರಾಗಿ ಬೆಂಬಲ ನೀಡುವ ಬದಲು ತಪ್ಪಿಸಿಕೊಂಡಿದ್ದಾರೆ. ಕಾವೇರಿ ನದಿ ನೀರು ವಿಚಾರದಲ್ಲಿ ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ, ವಜಾಗೊಳಿಸುವ ಕೆಲಸವಾದಲ್ಲಿ ಜೈಲ್ ಭರೋ ನಡೆಸಲೂ ನಾವು ಸಿದ್ಧರಿದ್ದೇವೆ ಎಂದರು.
ಕಾವೇರಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ತೆರಳಿದ್ದ ಬಿಜೆಪಿ ಸಂಸದರಿಗೆ ಪ್ರಧಾನಿ ಸ್ಪಂದನೆ ನೀಡದೆ ಸಚಿವೆ ಉಮಾಬಾರತಿ ಅವರ ಬಳಿಗೆ ಕಳುಹಿಸಿದ್ದರು. ಉಮಾಭಾರತಿ ಅವರು ಕೂಡ ಸ್ಪಂದನೆ ನೀಡಿಲ್ಲ. ಬಿಜೆಪಿಗರಿಗೆ ಜವಾಬ್ದಾರಿ ಇರುತ್ತಿದ್ದರೆ ರಾಜ್ಯದ 17 ಮಂದಿ ಸಂಸದರು ರಾಜೀನಾಮೆ ನೀಡುವ ಸವಾಲೊಡ್ಡಿಯಾದರೂ ಈ ಕೆಲಸವನ್ನು ಸಾಧಿಸಬಹುದಿತ್ತು. ಪ್ರಧಾನಿಗೆ ಕಾವೇರಿ ನದಿ ನೀರು ವಿಚಾರದಲ್ಲಿ ಮಧ್ಯೆ ಪ್ರವೇಶಿಸಲು ಆಗುವುದಿಲ್ಲ ಎಂಬ ಹೇಳಿಕೆಯ ಬಗ್ಗೆ ಜನತೆ ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಜಮ್ಮು ಕಾಶ್ಮೀರದಲ್ಲಿ ನಿರಂತರವಾಗಿ ದಾಳಿ ನಡೆಯುತ್ತಿದೆ. ಕೇಂದ್ರ ಸರಕಾರ ರಕ್ಷಣಾ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ವಿಫಲತೆ ಕಂಡಿದೆ. 27 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ನಮ್ಮ ಸರಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದರೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಬೀಗುತ್ತಿದ್ದ ಬಿಜೆಪಿಗರು ಹಾಗೂ ದೇಶಭಕ್ತರು ಈಗ ತಕ್ಕ ಉತ್ತರ ನೀಡುವ ಬದಲು ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಭೆ ನಡೆಸುತ್ತಿದ್ದಾರೆ. ಯೋಧರು ಗುಂಡೇಟಿಗೆ ಬಲಿಯಾಗಿ 10 ದಿನಗಳು ಕಳೆದರೂ ಯಾಕೆ ತಕ್ಕ ಉತ್ತರ ನೀಡಲು ಮುಂದಾಗುತ್ತಿಲ್ಲ ಎಂದ ಅವರು ಅಡಿಕೆ ನಿಷೇಧ ವಿಚಾರದಲ್ಲಿ ಈ ಭಾಗದ ಬಿಜೆಪಿಗರು ನಿಯೋಗ ಕೊಂಡೊಯ್ಯುವ ಮೂಲಕ ಜನರನ್ನು ಮತ್ತೊಮ್ಮೆ ವಂಚಿಸುವ ಕೆಲಸ ಮಾಡುತ್ತಿದ್ದಾರೆ. ಅಡಿಕೆ ಹಾನಿಕಾರಕವಲ್ಲ ಎಂಬ ದಾಖಲೆಯನ್ನು ಈ ಮೊದಲೇ ನ್ಯಾಯಾಲಯಕ್ಕೆ ಹಾಜರುಪಡಿಸಿರುವಾಗ ಈಗ ಇದರ ಔಚಿತ್ಯವಾದರೂ ಏನಿತ್ತು ಎಂದ ಅವರು ಬಿಜೆಪಿಗರು ಕೇವಲ ನಾಟಕವಾಡುವ ಕೆಲಸದಲ್ಲಿ ನಿರತರಾಗುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.
ತಾಕತ್ತಿದ್ದರೆ ಕಾನೂನು ಜಾರಿಗೊಳಿಸಲಿ
ಮತಾಂತರ ವಿಚಾರಕ್ಕೆ ಸಂಬಂಧಿಸಿ ಸುಳ್ಯದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರು ಭಾಷಣ ಮಾಡಿ ಅನ್ಯ ಮತೀಯ ಹುಡುಗ ಹುಡುಗಿಯರು ಪರಸ್ಪರ ಮಾತನಾಡಬಾರದು ಎಂದು ಆದೇಶಿಸಿದ್ದಾರೆ. ಕೇಂದ್ರದಲ್ಲಿ ಅವರದ್ದೇ ಬಿಜೆಪಿ ಸರಕಾರವಿದೆ. ಅವರಿಗೆ ತಾಕತ್ತಿದ್ದರೆ, ಧೈರ್ಯವಿದ್ದರೆ ಸಂವಿಧಾನಕ್ಕೆ ವಿರುದ್ಧವಾಗಿ ಕಾನೂನು ಜಾರಿಗೊಳಿಸಲಿ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ ಅವರು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಉಪಾಧ್ಯಕ್ಷ ಗಣೇಶ್ ರಾವ್, ಕಾರ್ಯದರ್ಶಿ ಬಿ.ಎ.ರಹ್ಮಾನ್ ಬಪ್ಪಳಿಗೆ , ಸೇವಾದಳದ ಸಂಘಟಕ ಜೋಕಿಂ ಡಿಸೋಜ ಹಾಜರಿದ್ದರು.







