ಆರೋಗ್ಯಕರ ಜೀವನಕ್ಕೆ ಕಾನೂನು ತಿಳುವಳಿಕೆ ಅಗತ್ಯ: ದೇವೇಂದ್ರ ಪಂಡಿತ್
ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ

ಕಾರವಾರ, ಸೆ.22: ಮನುಷ್ಯನ ಆರೋಗ್ಯಕರ ಜೀವನಕ್ಕೆ ಆಹಾರ ಹೇಗೆ ಮುಖ್ಯವೋ, ಕಾನೂನು ತಿಳುವಳಿಕೆಯು ಅಷ್ಟೇ ಮುಖ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ್ ಹೇಳಿದರು.
ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಅಮದಳ್ಳಿಯ ಗ್ರಾಪಂ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನುಷ್ಯನಿಗೆ ಪೌಷ್ಟಿಕ ಆಹಾರ ಸೇವನೆ, ಕ್ರಮಬದ್ಧವಾದ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಆರೋಗ್ಯ ಪೂರ್ಣ ಜೀವನಕ್ಕೆ ಸಹಕಾರಿಯಾಗುವುದು ಎಂದರು.
ಆರೋಗ್ಯ ಇಲಾಖೆಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಚಂಪಾ ನಾಯ್ಕ ಮಾತನಾಡಿ, ಚುಚ್ಚುಮದ್ದು ಕಾರ್ಯಕ್ರಮದ ಕುರಿತು ಡೆಂಗ್ ಜ್ವರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗರ್ಭಿಣಿ, ಬಾಣಂತಿ ಆರೈಕೆ ಆಯೋಡಿನ್ ಉಪ್ಪಿನ ಬಳಕೆ ಹಾಗೂ ಉಪಯೋಗಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಅಂಗನವಾಡಿ ಮೇಲ್ವಿಚಾರಕಿ ಲೀಲಾ ಎಸ್ ನಾಯ್ಕ ಮಾತನಾಡಿ, ಅಂಗನವಾಡಿ ಕೇಂದ್ರದ ಮೂಲಕ ಸಿಗುವ ಸೌಲಭ್ಯಗಳು, ಕಾರ್ಯಕ್ರಮದ ಉದ್ದೇಶ, ಪೌಷ್ಟಿಕ ಆಹಾರದ ಆವಶ್ಯಕತೆ, ಸಬಲಾ ಯೋಜನೆ ಮುಂತಾದವುಗಳ ವಿವರವಾದ ಮಾಹಿತಿ ನೀಡಿದರು. 20 ಅಂಗನವಾಡಿ ಕೇಂದ್ರಗಳಿಂದ ಆಗಮಿಸಿದ ಮಕ್ಕಳ ತಾಯಂದಿರು, ಕಿಶೋರಿಯರು ತಾವು ತಯಾರಿಸಿ ತಂದಂತಹ ಪೌಷ್ಟಿಕ ಆಹಾರವನ್ನು ತಯಾರಿಸುವ ವಿಧಾನ ಉಪಯೋಗಗಳ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಅಮದಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ರಾಧಾ.ಎಸ್. ಗೌಡ, ರೇಣುಕಾ ವಿನಾಯಕ ಗುನಗಾ, ಸಾವಿತ್ರಿ ಸುರೇಶ ಗೌಡ ಉಪಸ್ಥಿತರಿದ್ದರು. ತಾಯಂದಿರು, ಕಿಶೋರಿಯರು, ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಅಂಗನವಾಡಿ ಕಾರ್ಯಕರ್ತೆ ರೇವತಿ ಹರಿಕಂತ್ರ ಕಾರ್ಯಕ್ರಮ ನಿರೂಪಿಸಿದರು. ಸರೋಜಾಗುನಗಾ ವಂದಿಸಿದರು.







