ಮಹಾನ್ ಪುರುಷರ ತತ್ವಾದರ್ಶ ಪಾಲಿಸಿ: ಫೌಝಿಯಾ
ವಿಶ್ವಶಾಂತಿ ದಿನಾಚರಣೆ ಕಾರ್ಯಕ್ರಮ

ಕಾರವಾರ, ಸೆ.22: ಗಾಂಧೀಜಿ, ಬುದ್ಧರಂತಹ ಮಹಾನ್ ಪುರುಷರು ಶಾಂತಿ ಮೂಲಕ ಜಗತ್ತಿಗೆ ದಾರಿ ದೀಪವಾಗಿದ್ದು, ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವ ಆವಶ್ಯಕತೆ ಇದೆ ಎಂದು ಪ್ರೊಬೆಶೆನರಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಹೇಳಿದರು.
ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರದಲ್ಲಿ ಆಯೋಜನೆಗೊಂಡಿದ್ದ ವಿಶ್ವಶಾಂತಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭವ್ಯ ಭಾರತದಲ್ಲಿ ಬುದ್ಧ, ಮಹಾತ್ಮಾ ಗಾಂಧಿಯಂತಹ ಮಹಾನ್ ಪುರುಷರು ಜನ್ಮ ತಾಳಿ ಶಾಂತಿ ಮಂತ್ರದಿಂದ ಮನುಕುಲಕ್ಕೆ ದಾರಿ ದೀಪವಾಗಿದ್ದಾರೆ. ಅಲಿಪ್ತ ನೀತಿಯ ಮುಖಾಂತರ ಜಗತ್ತಿಗೆ ಶಾಂತಿ ನೀಡಿದ ನಮ್ಮ ದೇಶ ಭಾರತವೆಂಬ ಹೆಮ್ಮೆ ನಮಗಿದೆ ಎಂದರು.
ಮುಖ್ಯ ಅತಿಥಿ ದಿನೇಶ ಗಾಂವ್ಕರ ಮಾತನಾಡಿ, ಉತ್ತಮ ನಾಗರಿಕನಾಗಲು ಶಾಂತಿ ಬೇಕು , ದ್ವೇಷ ಬೇಡ ಎನ್ನುವಂತಹ ಕಾರ್ಯಕ್ರಮಗಳು ಆಚರಣೆಯಾಗದೆ ಅನುಕರಣೆಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲರು ಪರಸ್ಪರ ಶಾಂತಿ ಸೌಹಾರ್ದಯುತವಾಗಿ ಬದುಕಲು ಪ್ರಯತ್ನಿಸಬೇಕು ಎಂದರು.
ಸಂಜಯ ಸಾಳುಂಕೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ದೇಶ ಸಂದಿಗ್ಧ ಸ್ಥಿತಿ ಬಂದರೂ ಶಾಂತಿಯನ್ನು ಇಷ್ಟಪಡುತ್ತದೆ. ಅದೇ ರೀತಿ ನಮ್ಮ ಮನೆ ಮತ್ತು ಮನಗಳಲ್ಲಿ ಶಾಂತಿ ನೆಲೆಸಲಿ ಎಂದು ಆಶಿಸಿದರು. ನಾಗೇಶ ಶಿವಪುರ, ಮಹಾದೇವ ರಾಣೆ, ಆರ್.ಕೆ. ದುರ್ಗೇಕರ್ ಉಪಸ್ಥಿತರಿದ್ದರು. ದೀಕ್ಷಿತಾ ಸಂಗಡಿಗರ ಪ್ರಾರ್ಥಿಸಿದರು. ಗಣೇಶ್ ಸ್ವಾಗತಿಸಿ ನಿರೂಪಿಸಿದರು. ಮನ್ಸೂರ ಮುಲ್ಲಾ ವಂದಿಸಿದರು.







