‘ಅನ್ ಬೀಟನ್ ಪಾತ್ಸ್’ ಆತ್ಮಕತೆ ಬಿಡುಗಡೆ

ಮಂಗಳೂರು,ಸೆ.22:ಮಂಗಳೂರು ವಿಶ್ವವಿದ್ಯಾನಿಲಯದ ಕ್ರೈಸ್ತ ಧರ್ಮ ಅಧ್ಯಯನ ಪೀಠದ ಮಾಜಿ ಅಧ್ಯಕ್ಷ, ಕ್ರೈಸ್ತ ಧರ್ಮಗುರು ವಂ.ಜಾನ್ ಫೆರ್ನಾಂಡೀಸ್ ರ ಆತ್ಮಕತೆ ‘ಅನ್‌ಬಿಟನ್ ಪಾತ್ಸ್’ ಆಂಗ್ಲ ಭಾಷಾ ಕೃತಿಯನ್ನು ನಂತೂರು ಪದುವ ಕಾಲೇಜು ಸಭಾಂಗಣದಲ್ಲಿ ಹಿರಿಯ ಸಮಾಜಿ ಸೇವಕಿ ಒಲಿಂಡಾ ಪಿರೇರಾ ಬಿಡುಗಡೆಗೊಳಿಸಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ರಾಜಕೀಯ ತಜ್ಞ ಡಾ.ವೆಲೇರಿಯನ್ ರೋಡ್ರಿಗಸ್ ಕೃತಿಯ ಬಗ್ಗೆ ಮಾತನಾಡಿ, ಜಾನ್ ಫೆರ್ನಾಂಡೀಸ್‌ರ ಜೀವನ ಚರಿತ್ರೆ ಜಿಲ್ಲೆಯ ತಳಮಟ್ಟದ ಜನಸಾಮನ್ಯರ ನಡುವಿನ ಹೋರಾಟದ ಕಥನವಾಗಿದೆ. ಜಿಲ್ಲೆಯ ಬಹುಮುಖಿ ಸಂಸ್ಕೃತಿಯ ಜನರ ನಡುವೆ,ಆ ಸಂಸ್ಕೃತಿಗಳನ್ನು ಗುರುತಿಸಿ,ಗೌರವಿಸುತ್ತಾ, ಸರಳತೆಯೊಂದಿಗೆ ತಳವರ್ಗದ ಜನಸಾಮಾನ್ಯರಿಗೂ ಸ್ವಾಭಿಮಾನದ ಬದುಕಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ, ಸವಾಲನ್ನು ಎದುರಿಸಿದ ವಿವರಗಳನ್ನು ಒಳಗೊಂಡಿದೆ. ಫಾ.ಜಾನ್‌ರವರು ಸೌರ್ಹಾದ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದ ಸಂಗತಿಗಳನ್ನು ಮುಂದಿನ ಪೀಳಿಗೇಗೆ ತಲುಪಿಸುವ ನಿಟ್ಟಿನಲ್ಲಿ ಈ ಕೃತಿ ಮಹತ್ವ ಪೂರ್ಣವಾಗಿದೆ ಎಂದು ವೆಲೇರಿಯನ್ ರೋಡ್ರಿಗಸ್ ತಿಳಿಸಿದರು.
ಫಾ.ಜಾನ್ ಫೆರ್ನಾಂಡೀಸ್ ಧರ್ಮಸಮನ್ವಯ ಸಂಘಟನೆಯ ಜಿಲ್ಲೆಯಲ್ಲಿ ಧಾರ್ಮಿಕ ಸಾಮರಸ್ಯ ಹಾಗೂ ಸಮಾಜದ ಜನರ ಬಗೆಗೆ ಇದ್ದ ನೈಜ ಕಾಳಜಿ, ಪ್ರತೀಕವಾಗಿತ್ತು. ಜಾನ್‌ರವರು ಸರಳತೆಯನ್ನು ಮೈಗೂಡಿಸಿಕೊಂಡ ನಿಷ್ಠುರವಾದ ಸಾಮಾಜಿಕ ಕಳಕಳಿಯನ್ನು, ಜೀವನದಲ್ಲಿ ಶ್ರದ್ಧೆಯನ್ನು ಮೈಗೂಡಿಸಿಕೊಂಡಿದ್ದ ತಳ ಮಟ್ಟದ ಜನರ ಬದುಕಿನ ಬಗ್ಗೆ ಕಾಳಜಿ ಹೊಂದಿದ್ದ ಮಹಾನ್ ವ್ಯಕ್ತಿಯಾಗಿದ್ದರು ಎಂದು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಶ್ರೀಲತಾ ತಿಳಿಸಿದರು.
ತನ್ನ ಕೃತಿಯ ಬಗ್ಗೆ ಮಾತನಾಡಿದ ವಂ.ಜಾನ್ ಫೆರ್ನಾಂಡೀಸ್, ಸಮಾಜದ ಅಂಚಿನಲ್ಲಿರುವ ಜನರು ಸ್ವಾಭಿಮಾನದೊಂದಿಗೆ ಎಲ್ಲರೊಂದಿಗೆ ಬದುಕಲು ಅವರನ್ನು ಬೆಸೆಯಲು ನಡೆಸಿದ ಪ್ರಯತ್ನಗಳನ್ನು ದಾಖಲಿಸಿದ್ದೇನೆ. ನನ್ನ ಕೃತಿಯ ಹೆಸರೇ ಹೊಸ ಹಾದಿಯ ಆನ್ವೇಷಣೆಯಲ್ಲಿ ಎಂದಿದೆ. ಜೊತೆಗೆ ಸಮಕಾಲೀನ ಆಗು ಹೋಗುಗಳನ್ನು ಆಧ್ಯಾತ್ಮಿಕ ನೆಲೆಯಲ್ಲಿ ವಿಶ್ಲೇಷಿಸಿದ ಅಂಶಗಳು, ಸವಾಲನ್ನು ಎದುರಿಸದ ಸಂದರ್ಭದಲ್ಲಿನ ಅನುಭವಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.







