ನಗರಸಭೆ ಅನುಮತಿ ಪಡೆಯದೆ ಫ್ಲೆಕ್ಸ್ ಹಾಕಿದರೆ 5ಸಾವಿರ ರೂ. ದಂಡ: ಕವಿತಾ ಶೇಖರ್
ಬ್ಯಾನರ್ ತೆರವು

ಚಿಕ್ಕಮಗಳೂರು, ಸೆ.22: ನಗರಸಭೆ ಅನುಮತಿ ಪಡೆಯದೆ ನಗರದಲ್ಲಿ ಎಲ್ಲೆಡೆ ಬೇಕಾಬಿಟ್ಟಿಯಾಗಿ ಫ್ಲೆಕ್ಸ್ ಹಾಕಿದರೆ ಯಾವ ಒತ್ತಡಕ್ಕೂ ಮಣಿಯದೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ನಗರ ಸಭೆ ಅಧ್ಯಕ್ಷೆ ಕವಿತಾ ಶೇಖರ್ ಎಚ್ಚರಿಸಿದ್ದಾರೆ.
ಅವರು ಗುರುವಾರ ಅಧಿಕಾರಿಗಳೊಂದಿಗೆ ತೆರಳಿ ಸ್ವತಃ ಅಧ್ಯಕ್ಷರಿಗೆ ಶುಭಕೋರುವ ಫ್ಲೆಕ್ಸ್ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಹಾಕಲಾಗಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸಿ ನಂತರ ಮಾತನಾಡಿದರು.
ನಗರದಲ್ಲಿ ಬೇಕಾಬಿಟ್ಟಿಯಾಗಿ ಫ್ಲೆಕ್ಸ್‌ಗಳನ್ನು ಹಾಕಿರುವುದು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಮತ್ತು ಪಾದಚಾರಿಗಳಿಗೂ ತೊಂದರೆಯಾಗುತ್ತಿದೆ ಎಂಬ ಸಾರ್ವಜನಿಕರ ದೂರಿನನ್ವಯ ಈ ಕ್ರಮಕ್ಕೆ ಮುಂದಾಗಿದ್ದು, ಸ್ವಚ್ಛತೆ ಮತ್ತು ಪರಿಸರ ಕಾಪಾಡುವ ಹಿತದೃಷ್ಟಿಯಿಂದಲೂ ಇದು ಉತ್ತಮಕಾರ್ಯ ಎಂಬ ಸಲಹೆ ಪಡೆದು ಬೋರ್ಡ್‌ಗಳನ್ನು ತೆರೆಯಲು ತೀರ್ಮಾನಿಸಲಾಗಿದೆ ಎಂದರು.
ಸರಕಾರದ ಅಧಿಕೃತ ಜಾಹಿರಾತು ಫಲಕ ಹೊರತು ಪಡಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಗರದ 5 ಕಡೆಗಳಲ್ಲಿ ಫಲಕ ಅಳವಡಿಸಲು ಸ್ಥಳ ನಿಗದಿಸಲಾಗಿದೆ. ಅದಕ್ಕೂ ನಗರಸಭೆಯಿಂದ ಅನುಮತಿ ಪಡೆಯಬೇಕು. ಬಟ್ಟೆ ಬ್ಯಾನರ್‌ಗಳಿಗೆ ಮಾತ್ರ ಅವಕಾಶ ಒದಗಿಸಲಾಗಿದ್ದು ಕಾನೂನು ಉಲ್ಲಂಘಿಸಿ ಫ್ಲೆಕ್ಸ್ ಹಾಕಿದರೆ ಫ್ಲೆಕ್ಸ್ ತಯಾರಕರು ಹಾಗೂ ಬೋರ್ಡ್‌ಗೆ ಸಂಬಂಧಿಸಿದವರಿಗೆ ದಂಡ ವಿಧಿಸಲಾಗುವುದು ಎಂದು ಹೇಳಿದರು.
ಬಟ್ಟೆ ಬ್ಯಾನರ್‌ಗಳಿಗೆ ಮಾತ್ರ ಅವಕಾಶ ನೀಡುವ ಕುರಿತು ಹಾಗೂ ಫ್ಲೆಕ್ಸ್‌ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮುಂದಿನ ನಗರಸಭೆ ಮೀಟಿಂಗ್‌ನಲ್ಲಿ ವಿಷಯ ಪ್ರಸ್ತಾಪಿಸಿ ಫ್ಲೆಕ್ಸ್ ನಿಷೇಧಿಸುವ ಬಗ್ಗೆ ಚರ್ಚಿಸಲಾಗುವುದು. ಸಾರ್ವಜನಿಕರ ಸಹಭಾಗಿತ್ವವಿಲ್ಲದೆ ಯಾವುದೆ ಯೋಜನೆ ಅಳವಡಿಸಿದರೂ ಫಲಪ್ರದವಾಗದು ಹಾಗಾಗಿ ಜನರು ಸ್ಪಂದಿಸಬೇಕೆಂದು ಮನವಿ ಮಾಡಿದರು.
ಉಪಾಧ್ಯಕ್ಷ ರವೀಂದ್ರ ಪ್ರಭು ಮಾತನಾಡಿ, ಯಾವುದೆ ಪಕ್ಷದ ಕಾರ್ಯಕರ್ತರು ಪ್ಲ್ಲೆಕ್ಸ್‌ಗಳನ್ನು ಹಾಕಬಾರದು. ಪ್ಲಾಸ್ಟಿಕ್ ಅಂಶ ಇರುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಹಾಗಾಗಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರಿಗೆ ಶುಭಕೋರಿದ ನಾಮಫಲಕಗಳನ್ನೆ ಮೊದಲು ತೆರವುಗೊಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅಫ್ಸರ್ ಅಹ್ಮದ್, ಪ್ರಭರ ಪೌರಾಯುಕ್ತ ಆನಂದ್, ಪರಿಸರ ಅಭಿಯಂತರ ರಂಗಪ್ಪಮತ್ತಿತರರು ಉಪಸ್ಥಿತರಿದ್ದರು.







