ಸರಕಾರಿ ಅಂಗನವಾಡಿಗಳಲ್ಲಿ ಉತ್ತಮ ಸೌಲಭ್ಯ ಅಗತ್ಯ
ಕಾರವಾರ, ಸೆ.22: ಪಾಲಕರು ತಮ್ಮ ಮಕ್ಕಳನ್ನು ಕಿಂಡರ್ ಗಾರ್ಟನ್‌ಗಳಿಗೆ ಸೇರಿಸುತ್ತಿದ್ದಾರೆ. ಇದರಿಂದ ಸರಕಾರಿ ಅಂಗನವಾಡಿಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಂಗನವಾಡಿಗಳಲ್ಲಿ ಕಿಂಡರ್ ಗಾರ್ಟನ್‌ನಷ್ಟೇ ಸೌಲಭ್ಯ ಕಲ್ಪಿಸಬೇಕು ಎಂದು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಇಲ್ಲಿನ ತಾಲೂಕು ಪಂಚಾಯತ್‌ನಲ್ಲಿ ಗುರುವಾರ ನಡೆದ ಸಭೆಯಲ್ಲಿ ಸರ್ವ ಸದಸ್ಯರು ನಿರ್ಣಯ ಕೈಗೊಂಡರು.
ತಾಲೂಕು ಪಂಚಾಯತ್ ಅಧ್ಯಕ್ಷೆ ಪ್ರಮಿಳಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆದವು. ಸರಕಾರಿ ಅಂಗನವಾಡಿಯಲ್ಲಿ ಯಾವುದೇ ಸೌಲಭ್ಯಗಳು ಇಲ್ಲದೆ ಇರುವುದರಿಂದ ಅನೇಕ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಕಡಿಮೆ ಮಕ್ಕಳಿರುವ ಅಂಗನವಾಡಿಗಳನ್ನು ಬೇರೆಡೆ ಸ್ಥಳಾಂತರಿಸುವ ಕುರಿತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪಿ.ಎಚ್. ನಾಯ್ಕ ವಿಷಯ ಪ್ರಸ್ತಾಪಿಸಿ, ಅಂಗನವಾಡಿಗಳ ಮೇಲ್ಛಾವಣಿಗಳು ಸೋರುತ್ತಿದೆ. ಆಟಿಕೆ ಸಾಮಗ್ರಿಗಳು ಸೇರಿದಂತೆ ಯಾವುದೇ ವ್ಯವಸ್ಥೆಗಳಿಲ್ಲದ ಕಾರಣ ಖಾಸಗಿ ಕಿಂಡರ್ ಗಾರ್ಟನ್‌ಗಳಿಗೆ ಮಕ್ಕಳನ್ನು ಕಳುಹಿಸಲಾಗುತ್ತಿದೆ. ಅಂಗನವಾಡಿಗಳಿಗೆ ಉತ್ತಮ ಸೇವೆಗಳನ್ನು ಕಲ್ಪಿಸಿದರೆ ಮಕ್ಕಳ ಸಂಖ್ಯೆಯೂ ಹೆಚ್ಚುತ್ತದೆ ಎಂದು ಪ್ರಸ್ತಾಪಿಸಿದರು. ಮುಡಗೇರಿ ಗ್ರಾಪಂ ವ್ಯಾಪ್ತಿಯ ಸಾನ ಮುಡಗೇರಿ ಅಂಗನವಾಡಿ ಕಟ್ಟಡ ಕಾಮಗಾರಿ ಕಳಪೆಯಾಗಿದೆ. ಸ್ಲಾಬ್‌ಗೆ ನೀರು ಹಾಕದೇ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎಂದು ಸುರೇಂದ್ರ ಗಾಂವಕರ್ ಆಕ್ಷೇಪಿಸಿದರು. ಸ್ಥಳ ಪರಿಶೀಲನೆ ನಡೆಸುವಂತೆ ಸಿಡಿಪಿಒಗೆ ಸೂಚಿಸಿದರು.
ಅನುಸೂಚಿತ ಬುಡಕಟ್ಟು ಮತ್ತು ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಿಂದ ತಾಲೂಕಿನ ಜನರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಜಿಪಂ ಸದಸ್ಯ ಶಾಂತಾ ಬಾಂದೇಕರ್ ಆಕ್ಷೇಪ ವ್ಯಕ್ತಪಡಿಸಿದರು. ಅರ್ಜಿ ಸಲ್ಲಿಸಲು ಇರುವ ನಿಯಮಾವಳಿಗಳನ್ನು ಸಡಿಲಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅರಣ್ಯ ಅಧಿಕಾರಿ ಕೆ.ಡಿ. ನಾಯ್ಕ, ನಿಯಮಾವಳಿ ಸಡಿಲಿಕೆ ಸರಕಾರದ ಮಟ್ಟದಲ್ಲಿ ಆಗಬೇಕಾಗಿದೆ ಎಂದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಕೃಷ್ಣ ಮೆಹತಾ, ಚೈತ್ರಾ ಕೊಠಾರಕರ್, ತಾಪಂ ಉಪಾಧ್ಯಕ್ಷ ರವೀಂದ್ರ ಪವಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ವೇದಿಕೆಯಲ್ಲಿದ್ದರು.







