ಜಪಾನ್ ಓಪನ್: ಶ್ರೀಕಾಂತ್ ಕ್ವಾರ್ಟರ್ ಫೈನಲ್‌ಗೆ

ಟೋಕಿಯೊ, ಸೆ.22: ರಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಕೆ.ಶ್ರೀಕಾಂತ್ ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್ ಸೂಪರ್ ಸರಣಿಯ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.
ಗುರುವಾರ ಇಲ್ಲಿ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಶ್ರೀಕಾಂತ್‌ರ ಎದುರಾಳಿ ಅಜಯ್ ಜಯರಾಮ್ ಎಡ ಮಂಡಿನೋವಿನಿಂದಾಗಿ ಪಂದ್ಯ ಮೊಟಕುಗೊಳಿಸಿದ ಕಾರಣ ಮುಂದಿನ ಸುತ್ತಿಗೆ ತೇರ್ಗಡೆಯಾದರು.
ಮುಂಬೈ ಮೂಲದ ಜಯರಾಮ್‌ಗೆ ಮೊದಲ ಗೇಮ್ ಕೊನೆಗೊಂಡ ತಕ್ಷಣ ನೋವು ಕಾಣಿಸಿಕೊಂಡಿತು. ಆಗ ಶ್ರೀಕಾಂತ್ 21-16 ಅಂತರದ ಮುನ್ನಡೆಯಲ್ಲಿದ್ದರು.
ನನಗೆ ಎಡಮಂಡಿನೋವು ಕಾಣಿಸಿಕೊಂಡಿದೆ. ಗಾಯ ಗಂಭೀರವಾದುದಲ್ಲ. ಸರಿಯಾದ ವಿಶ್ರಾಂತಿ ಪಡೆದರೆ ಕೆಲವೇ ದಿನಗಳಲ್ಲಿ ಚೇತರಿಸಿಕೊಳ್ಳಬಹುದು. ನಾನು ಕೊರಿಯಾ ಓಪನ್ ವೇಳೆಗೆ ಸಜ್ಜಾಗುವೆ ಎಂದು ಜಯರಾಮ್ ತಿಳಿಸಿದ್ದಾರೆ.
8ನೆ ಶ್ರೇಯಾಂಕದ ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ಜರ್ಮನಿಯ ಮಾರ್ಕ್ ಝ್ವಿಬ್ಲರ್‌ರನ್ನು ಎದುರಿಸಲಿದ್ದಾರೆ. ಜರ್ಮನಿ ಆಟಗಾರನ ವಿರುದ್ಧ ಶ್ರೀಕಾಂತ್ 2-1 ದಾಖಲೆ ಹೊಂದಿದ್ದಾರೆ.
ಮತ್ತೊಂದು ಪಂದ್ಯದಲ್ಲಿ ಎಚ್‌ಎಸ್ ಪ್ರಣಯ್ ಡೆನ್ಮಾರ್ಕ್‌ನ ಎರಡನೆ ಶ್ರೇಯಾಂಕದ ವಿಕ್ಟರ್ ಅಕ್ಸೆಲ್‌ಸನ್ ವಿರುದ್ಧ 44 ನಿಮಿಷಗಳ ಹೋರಾಟದಲ್ಲಿ 16-21, 19-21 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.







