ಉಮಾಭಾರತಿ ಜೊತೆ ಸಿಎಂ ಮಾತುಕತೆ: ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಮನವಿ

ಹೊಸದಿಲ್ಲಿ/ಬೆಂಗಳೂರು, ಸೆ.22: ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಕುರಿತು ಸಿಎಂ ಸಿದ್ದರಾಮಯ್ಯ, ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿಯವರ ಜೊತೆ ಮಾತುಕತೆ ನಡೆಸಿದ್ದಾರೆ.
ಗುರುವಾರ ದಿಲ್ಲಿಯಲ್ಲಿ ಉಮಾಭಾರತಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾವೇರಿ ನಿರ್ವಹಣೆ ಮಂಡಳಿ ರಚನೆ ಮಾಡುವಂತೆ ಉಭಯ ರಾಜ್ಯಗಳ ಪೈಕಿ ಯಾರೂ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿರಲಿಲ್ಲ. ಆದರೂ, ಈ ಸಂಬಂಧ ಆದೇಶ ನೀಡಲಾಗಿದೆ ಎಂದರು.
ಸೆ.27ರಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿರುವ ವಿಚಾ ರಣೆ ಸಂದರ್ಭದಲ್ಲಿ ಕೇಂದ್ರ ಸರಕಾರದ ಸಾಲಿಸಿಟರ್ ಜನರಲ್, ಕಾವೇರಿ ನಿರ್ವಹಣೆ ಮಂಡಳಿ ರಚನೆ ಸಂಬಂಧ ನೀಡಿರುವ ಆದೇಶಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ಉಮಾಭಾರತಿಯವರಿಗೆ ಮನವಿ ಮಾಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸೆ.21ರಿಂದ 27ರವರೆಗೆ ಪ್ರತಿನಿತ್ಯ ಆರು ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಪಾಲನೆ ಮಾಡುವುದು ಕಷ್ಟ. ಈ ಹಿಂದೆ 12 ಸಾವಿರ ಕ್ಯೂಸೆಕ್ ನೀರನ್ನು 14 ದಿನಗಳ ಕಾಲ ನೀಡಲಾಗಿದೆ. ಆದರೆ, ಈಗ ಜಲಾಶಯಗಳಲ್ಲಿ ನೀರು ಇಲ್ಲ ಎಂದು ಅವರು ಹೇಳಿದರು.
ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಹಲವು ನಗರಗಳಿಗೆ ಕುಡಿಯುವ ನೀರು ಪೂರೈಸಲು 27 ಟಿಎಂಸಿ ನೀರಿನ ಅಗತ್ಯವಿದೆ. ಆದರೆ, ಕಾವೇರಿ ಕಣಿವೆ ಭಾಗದ ಕೆಆರ್‌ಎಸ್, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳಲ್ಲಿ ಇರುವುದು ಕೇವಲ 26 ಟಿಎಂಸಿ ನೀರು ಮಾತ್ರ. ಈ ವಿಚಾರವನ್ನು ಕೇಂದ್ರ ಸಚಿವೆಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದಲ್ಲಿ ಬುಧವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಹಾಗೂ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆಯೂ ಉಮಾಭಾರತಿಯವರಿಗೆ ಮುಖ್ಯಮಂತ್ರಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಲ್ಲದೆ, ಕಾವೇರಿ ನಿರ್ವಹಣೆ ಮಂಡಳಿ ರಚನೆಯನ್ನು ರಾಜ್ಯ ವಿರೋಧಿಸಲು ಇರುವಂತಹ ಕಾರಣ ಗಳ ಕುರಿತು ಮಾತುಕತೆ ನಡೆಸಲಾಗಿದೆ.
ಮುಖ್ಯಮಂತ್ರಿಯೊಂದಿಗೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಗೋವಿಂದರಾಜು, ಮಾಜಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.







