ಸುಳ್ಯ: ತಲವಾರಿನಿಂದ ಕೊಚ್ಚಿ ಕಾಂಗ್ರೆಸ್ ಮುಖಂಡನ ಕೊಲೆ
ರಿವಾಲ್ವರ್ ಇದ್ದರೂ ಬದುಕುಳಿಯಲಿಲ್ಲ

ಸುಳ್ಯ, ಸೆ.23: ಕಾಂಗ್ರೆಸ್ ಮುಖಂಡ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಕರಾವಳಿ ವಿಭಾಗದ ಅಧ್ಯಕ್ಷ ಇಸ್ಮಾಯೀಲ್ ನೇಲ್ಯಮಜಲು (52) ಅವರನ್ನು ದುಷ್ಕರ್ಮಿಗಳ ತಂಡವೊಂದು ತಲವಾರಿನಿಂದ ಕಡಿದು ಹತ್ಯೆ ಮಾಡಿದ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಇಸ್ಮಾಯೀಲ್ ಅವರು ಶುಕ್ರವಾರ ಸುಳ್ಯ ನ್ಯಾಯಾಲಯಕ್ಕೆ ಪ್ರಕರಣವೊಂದರ ವಿಚಾರಣೆಗೆ ಸಂಬಂಧಿಸಿ ಬಂದಿದ್ದರು. ಮಧ್ಯಾಹ್ನ ವಾಪಸ್ ಬೆಳ್ಳಾರೆಗೆ ತೆರಳುತ್ತಿದ್ದಾಗ ಐವರ್ನಾಡು ಮಸೀದಿಗೆ ನಮಾಝ್‌ಗೆಂದು ತೆರಳಿದ್ದರು. ಸಮೀಪದ ಅಂಗಡಿ ಬಳಿ ತನ್ನ ಇನೋವಾ ಕಾರು ನಿಲ್ಲಿಸಿ ಮಸೀದಿಗೆ ಹೋಗಿ ನಮಾಝ್ ಮುಗಿಸಿ 1:45ರ ವೇಳೆಗೆ ವಾಪಸ್ ತನ್ನ ಕಾರಿನ ಬಳಿ ಬರುತ್ತಿದ್ದಂತೆ ದುಷ್ಕರ್ಮಿಗಳ ತಂಡವೊಂದು ತಲವಾರಿನಿಂದ ಕಡಿದು ಪರಾರಿಯಾಗಿದೆ. ಕುತ್ತಿಗೆಗೆ ಮಾರಣಾಂತಿಕ ಏಟು ತಗಲಿ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು.
ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ವಿಷಯ ತಿಳಿದು ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದರು. ರಕ್ತದ ಮಡುವಿನಲ್ಲಿ ಬಿದ್ದ ಮೃತದೇಹವನ್ನು ಬಳಿಕ ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.
ಸ್ಥಳಕ್ಕೆ ಶ್ವಾನದಳ ಹಾಗೂ ವಿಧಿವಿಜ್ಞಾನ ತಜ್ಞರು ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ. ಶ್ವಾನ ಮುಖ್ಯ ರಸ್ತೆಯಲ್ಲಿ ಐವರ್ನಾಡು ಪೇಟೆ ಕಡೆಗೆ ಸಾಗಿದ್ದು, ದುಷ್ಕರ್ಮಿಗಳು ಆ ಕಡೆಗೆ ಪರಾರಿಯಾಗಿರಬೇಕೆಂದು ಶಂಕಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಬೊರಸೆ, ಎಎಸ್ಪಿ ರಿಷ್ಯಂತ್ ಸ್ಥಳಕ್ಕೆ ಬೇಟಿ ನೀಡಿದ್ದಾರೆ.
ನೇಲ್ಯಮಜಲು ಇಸ್ಮಾಯೀಲ್ ಹಾಗೂ ವಹಿದಾ ಇಸ್ಮಾಯೀಲ್ ದಂಪತಿ ಬೆಳ್ಳಾರೆಯಲ್ಲಿ ನೆಲೆಸಿದ್ದು, ರಾಜಕೀಯ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದರು. ವಹಿದಾ ಅವರು ಗ್ರಾಮ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ ಹಾಗೂ ಸರಕಾರದ ಕೆಲವು ನಿಗಮಗಳಲ್ಲಿ ಕೂಡಾ ಸೇವೆ ಸಲ್ಲಿಸಿ ರಾಜ್ಯ ಮಟ್ಟದಲ್ಲೂ ಪ್ರಭಾವಿ ನಾಯಕಿಯಾಗಿದ್ದರು. ಇಸ್ಮಾಯೀಲ್ ಪಕ್ಷದ ಪದಾಧಿಕಾರಿಯಾಗಿ ಕ್ರಿಯಾಶೀಲರಾಗಿದ್ದು, ಇತ್ತೀಚೆಗಷ್ಟೇ ಅಲ್ಪಸಂಖ್ಯಾತ ಘಟಕದ ಕರಾವಳಿ ವಿಭಾಗದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಆರೋಪಿಗಳ ಶೀಘ್ರ ಪತ್ತೆ: ಎಸ್ಪಿ
ಪ್ರಕರಣದ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ ಬಂಧಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಬೊರಸೆ ಸುದ್ದಿಗಾರರಲ್ಲಿ ತಿಳಿಸಿದರು. ಹಂತಕರ ಪತ್ತೆಗಾಗಿ ಎಎಸ್ಪಿ ರಿಷ್ಯಂತ್ ಮಾರ್ಗದರ್ಶನದಲ್ಲಿ ಮೂರು ತನಿಖಾ ತಂಡ ರಚಿಸಲಾಗಿದ್ದು, ಈ ತಂಡಗಳು ಕಾಸರಗೋಡು, ಮಡಿಕೇರಿ ಹಾಗೂ ಬೆಂಗಳೂರು ಕಡೆಗೆ ಹಂತಕರ ಜಾಡು ಹಿಡಿದು ಹೊರಟಿದೆ ಎಂದು ತಿಳಿಸಿದರು.
ಎರಡು ವರ್ಷದ ಹಿಂದೆಯೂ ಕೊಲೆ ಯತ್ನ ನಡೆದಿತ್ತು
ಇಸ್ಮಾಯೀಲ್ ನೇಲ್ಯಮಜಲು ಹಾಗೂ ಅವರ ಪತ್ನಿ ವಹಿದಾ ಇಸ್ಮಾಯೀಲ್ ದಂಪತಿ ಮೇಲೆ 2 ವರ್ಷದ ಹಿಂದೆಯೂ ಕೊಲೆ ಯತ್ನ ನಡೆದಿತ್ತು. ಸುಳ್ಯದ ಗಾಂಧಿನಗರದಲ್ಲಿ ದಂಪತಿ ಮೇಲೆ ಚೂರಿಯಿಂದ ಇರಿದು ಮಾರಣಾಂತಿಕವಾಗಿ ಗಾಯಗೊಳಿಸಲಾಗಿತ್ತು. ಈ ಘಟನೆಯಲ್ಲಿ ಇಬ್ಬರೂ ಗಾಯಗೊಂಡಿದ್ದರು. ವಹೀದಾ ಸುದೀರ್ಘ ಸಮಯದ ಬಳಿಕ ಚೇತರಿಸಿಕೊಂಡಿದ್ದರು. ಆ ಬಳಿಕ ದಂಪತಿಗೆ ಪೊಲೀಸ್ ಅಂಗರಕ್ಷಕನನ್ನೂ ನಿಯೋಜನೆಗೊಳಿಲಾಗಿತ್ತು.
ಇಸ್ಮಾಯೀಲ್ ರಿವಾಲ್ವರ್ ಇಟ್ಟುಕೊಳ್ಳುತ್ತಿದ್ದರು. ಕೊಲೆಯತ್ನ ಪ್ರಕರಣದ ಪ್ರಮುಖ ಆರೋಪಿ ಬಂಧನಕ್ಕೊಳಗಾಗಿ ಕೆಲವು ಸಮಯ ಜೈಲಿನಲ್ಲಿದ್ದು ಆ ಬಳಿಕ ಜಾಮೀನು ಪಡೆದು ಹೊರ ಬಂದಿದ್ದ. ಬೆಳ್ಳಾರೆ ಮಸೀದಿ ಬಳಿಯ ಜಮೀನಿನ ವಿವಾದ ಈ ಘಟನೆಗೆ ಕಾರಣವಾಗಿತ್ತು. ಹತ್ಯೆ ಪ್ರಕರಣದೊಂದಿಗೆ ಈ ಪ್ರಕರಣಕ್ಕೂ ಸಂಬಂಧವಿದೆಯೇ ಎಂದು ತನಿಖೆಯಿಂದ ತಿಳಿದುಬರಬೇಕಿದೆ.
ರಿವಾಲ್ವರ್ ಇದ್ದರೂ ಬದುಕುಳಿಯಲಿಲ್ಲ
ದುಷ್ಕರ್ಮಿಗಳು ದಾಳಿಗೆ ಇಸ್ಮಾಯೀಲ್ ಅವರ ಕುತ್ತಿಗೆಗೆ ಭಾರೀ ಏಟು ತಗಲಿದ್ದು, ಬೆನ್ನು ಹಾಗೂ ಕೈಗೂ ಗಾಯವಾಗಿದೆ. ಮೂರು ಬೆರಳುಗಳು ಕತ್ತರಿಸಿ ಹೋಗಿದೆ. ಇಸ್ಮಾಯೀಲ್ ಅವರ ಸೊಂಟದಲ್ಲಿ ಲೋಡ್ ಆಗಿದ್ದ ರಿವಾಲ್ವರ್ ಇದ್ದರೂ ಅದನ್ನು ತೆಗೆಯಲು ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ವೃತ್ತಿಪರ ಕೊಲೆಗಾರರೇ ಕೊಲೆ ನಡೆಸಿಬಹುದೆಂಬ ಶಂಕೆ ವ್ಯಕ್ತವಾಗಿದೆ.
ಬೆಳ್ಳಾರೆಯಲ್ಲಿ ಮಸೀದಿ ಇದ್ದರೂ ಇಸ್ಮಾಯೀಲ್ ಪ್ರತಿ ಶುಕ್ರವಾರ ನಮಾಝ್‌ಗೆಂದು ಐವರ್ನಾಡಿನ ಮಸೀದಿಗೇ ಬರುತ್ತಿದ್ದರು. ಈ ಪರಿಸರ ಅಷ್ಟೇನೂ ಜನದಟ್ಟಣೆಯ ಪ್ರದೇಶವಲ್ಲ. ಹೀಗಾಗಿ ಘಟನೆ ಯಾರ ಗಮನಕ್ಕೂ ಬಂದಿಲ್ಲ. ಮಸೀದಿಯಲ್ಲಿ ನಮಾಝ್ ಮುಗಿಸಿ ಕೆಳಗೆ ರಸ್ತೆಯತ್ತ ಬಂದ ಇಸ್ಮಾಯೀಲ್ ಯಾರೊಂದಿಗೋ ಫೋನ್‌ನಲ್ಲಿ ಮಾತನಾಡಿ ಬಳಿ ತನ್ನ ವಾಹನದತ್ತ ಬರುತ್ತಿದ್ದಂತೆ ದುಷ್ಕರ್ಮಿಗಳ ತಂಡ ದಾಳಿ ನಡೆಸಿದೆ. ಇಸ್ಮಾಯಿಲ್ ಅವರ ಅಂಗರಕ್ಷಕ ಯಾವಾಗಲೂ ಜೊತೆಯಲ್ಲಿ ಇರುತ್ತಿದ್ದರೂ ಮಸೀದಿಗೆ ಹೋಗುವ ಕಾರಣ ಜೊತೆಯಲ್ಲಿರಲಿಲ್ಲವೆನ್ನಗಿದೆ.







