ಕೊಂಕಣ ರೈಲ್ವೆಯಿಂದ ಸ್ವಚ್ಛ ಸಪ್ತಾಹ: ಸೆ.24ರಂದು ‘ಸ್ವಚ್ಛ ಸಮರ್ಪಣೆ’, 25ರಂದು ಸ್ವಚ್ಛ ಆಹಾರ!

ಮಂಗಳೂರು, ಸೆ.23: ಸ್ವಚ್ಛ ಭಾರತ ಅಭಿಯಾನದಡಿ ಕೇಂದ್ರದ ರೈಲ್ವೇ ಸಚಿವ ಸುರೇಶ್ ಪ್ರಭು ಅವರ ನಿರ್ದೇಶನ ಹಾಗೂ ರೈಲ್ವೇ ಮಂಡಳಿಯ ಮುಂದಾಳತ್ವದಲ್ಲಿ ಕೊಂಕಣ ರೈಲ್ವೇ ವತಿಯಿಂದ ಸೆ. 17ರಿಂದ ಆರಂಭಗೊಂಡಿರುವ ಸ್ವಚ್ಛ ಸಪ್ತಾಹ ಕಾರ್ಯಕ್ರಮ ಸೆ. 25ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಮುಂದುವರಿಯಲಿದೆ.
ಸುದ್ದಿಗೋಷ್ಠಿಯಲ್ಲಿಂದು ಸಪ್ತಾಹದಂಗವಾಗಿ ಕೊಂಕಣ ರೈಲ್ವೇಯ ಮಂಗಳೂರು ರೈಲ್ವೇ ವಿಭಾಗದಲ್ಲಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಕೊಂಕಣ ರೈಲ್ವೇ ಕಾರ್ಪೊರೇಶನ್ ಲಿಮಿಟೆಡ್‌ನ ಸಾರ್ವಜನಿಕ ಸಂಪರ್ಕಗಳ ವ್ಯವಸ್ಥಾಪಕಿ ಕೆ. ಸುಧಾ ಕೃಷ್ಣಮೂರ್ತಿ ಮಾಹಿತಿ ನೀಡಿದರು.
ಸಪ್ತಾಹದ ಅಂಗವಾಗಿ ಸೆ. 24ರಂದು ರೈಲ್ವೇ ನೌಕರರು ಮತ್ತು ಅವರ ಕುಟುಂಬದವರು ತಮ್ಮ ವಸತಿ ನಿಲಯಗಳ ಸುತ್ತಮುತ್ತಲಿನ ಸ್ವಚ್ಛತೆಗಾಗಿ ಘೋಷಣಾ ಫಲಕಗಳೊಂದಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಿದ್ದಾರೆ. ಬೀದಿ ನಾಟಕಗಳ ಮೂಲಕ ರೈಲ್ವೆ ಪ್ರಯಾಣಿಕರಲ್ಲಿಯೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಿದ್ದಾರೆ ಎಂದವರು ಹೇಳಿದರು.
ಸೆ. 25ರಂದು ರೈಲ್ವೇ ಪ್ರಯಾಣಿಕರಿಗೆ ಪೂರೈಸಲಾಗುವ ಆಹಾರದ ಸ್ವಚ್ಛತೆಯನ್ನು ತಪಾಸಣೆ ಮಾಡುವ ಸಲುವಾಗಿ ರೈಲು ನಿಲ್ದಾಣಗಳಲ್ಲಿರುವ ಆಹಾರ ಮಳಿಗೆಗಳು, ತಿಂಡಿ ಅಂಗಡಿಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಈಗಾಗಲೇ ರೈಲುಗಳಲ್ಲಿ ಪ್ಲಾಸ್ಟಿಕ್‌ನಲ್ಲಿ ಆಹಾರ ಪದಾರ್ಥಗಳನ್ನು ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಂತಹ ಪ್ರವೃತ್ತಿ ಕಂಡು ಬಂದರೆ ದಂಡ ವಿಧಿಸುವ ಕ್ರಮಗಳೂ ನಡೆಯುತ್ತಿವೆ ಎಂದವರು ಹೇಳಿದರು.
ಸಪ್ತಾಹದ ಅಂಗವಾಗಿ ಸೆ. 17ರಿಂದ ರೈಲ್ವೇ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಸ್ವಚ್ಛ ಪರಿಸರವನ್ನು ಕಾಪಾಡುವ ಕುರಿತಂತೆ, ಸ್ಟೇಷನ್‌ಗಳ ಸ್ವಚ್ಛತೆ, ರೈಲುಗಳ ಸ್ವಚ್ಛತೆ, ನೀರಿನ ಸ್ವಚ್ಛತೆ, ರೈಲು ನಿಲ್ದಾಣಗಳ ಸುತ್ತಮುತ್ತಲಿನ ಪ್ರದೇಶಗಳ ಸ್ವಚ್ಛತೆ, ಸರಕಾರೇತರ ಸಂಸ್ಥೆಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಸ್ವಚ್ಛತೆಯ ಜಾಗೃತಿ ಕಾರ್ಯಕ್ರಮ, ಸ್ವಚ್ಛತೆಯ ಕುರಿತಂತೆ ಸಂವಾದ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಮಂಗಳೂರಿನಿಂದ ಸಂಚರಿಸುವ 36 ಜೋಡಿ ಕೊಂಕಣ ರೈಲ್ವೆ ವಿಭಾಗದ ರೈಲುಗಳಲ್ಲಿ ಈ ಸ್ವಚ್ಛತಾ ಅಭಿಯಾನವನ್ನು ಈಗಾಗಲೇ ಕೈಗೊಳ್ಳಲಾಗಿದೆ. ಮಂಗಳೂರು ವಿಭಾಗಕ್ಕೆ ಒಳಪಡುವ 21 ಸ್ಟೇಷನ್‌ಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿದೆ ಎಂದು ಅವರು ವಿವರಿಸಿದರು. ರೈಲುಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ರೈಲು ಬಳಕೆದಾರರ ಸಹಕಾರವೂ ಅಗತ್ಯವಾಗಿದೆ ಎಂದವರು ಹೇಳಿದರು.
ಕೊಂಕಣ ರೈಲ್ವೇ ಅಸಿಸ್ಟೆಂಟ್ ಟ್ರಾಫಿಕ್ ಮ್ಯಾನೇಜರ್ ವಿನಯ್ ಕುಮಾರ್ ಉಪಸ್ಥಿತರಿದ್ದರು.







