ಕೋಡಿ: ಬ್ಯಾರೀಸ್ ಪದವಿ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಕುಂದಾಪುರ, ಸೆ.23: ರಕ್ತದಾನವು ಶ್ರೇಷ್ಠದಾನಗಳಲ್ಲಿ ಒಂದಾಗಿದೆ. ರಕ್ತದಾನವು ಒಂದು ಜೀವದ ಜೀವ ಸಂರಕ್ಷಣೆಗೆ ಮಾಡುವಂತಹ ಸಮಾಜಸೇವೆಯಾಗಿದ್ದು ಇದಕ್ಕೆ ಜಾತಿ, ಮತ, ಧರ್ಮ ಎಂಬ ಭೇದವಿಲ್ಲ, ಹಾಗಾಗಿ ಇಂತಹ ಸಮಾಜ ಸೇವೆ ಎಂದೆನಿಸಿಕೊಂಡ ರಕ್ತದಾನ ಶಿಬಿರದಲ್ಲಿ ಸ್ವ-ಇಚ್ಛೆಯಿಂದಾಗಿ ಪಾಲ್ಗೊಳ್ಳಬೇಕೆಂದು ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೂದ್ ಅಭಿಪ್ರಾಯಪಟ್ಟಿದ್ದಾರೆ.
ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‌ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಭಾಗಿತ್ವದೊಂದಿಗೆ ಬ್ಯಾರೀಸ್ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕುಂದಾಪುರ ವಲಯದ ಯುವ ರೆಡ್ ಕ್ರಾಸ್ ಘಟಕದ ಅಧ್ಯಕ್ಷ ಎಸ್. ಜಯಕರ್ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಡಾ.ಎಸ್.ಎಚ್. ಶುಭೋತ್ ಕುಮಾರ್ ಮಲ್ಲಿ, ಗಣೇಶ ಆಚಾರ್ಯ, ಶಂಕರ ಶೆಟ್ಟಿ, ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಸಿದ್ದಪ್ಪ ಕೆ.ಎಸ್., ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಶಮೀರ್ ಉಪಸ್ಥಿತರಿದ್ದರು.
ಕಾಲೇಜಿನ ಎನ್ನೆಸ್ಸೆಸ್ ಯೋಜನಾಧಿಕಾರಿ ವಿದ್ಯಾಧರ್ ಪೂಜಾರಿ ಸ್ವಾಗತಿಸಿದರು. ಬ್ಯಾರೀಸ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಘಟಕಿ, ಗಣಕ ಶಾಸ್ತ್ರ ವಿಭಾಗದ ನೂತನ್ ವಂದಿಸಿದರು. ವಿದ್ಯಾರ್ಥಿನಿ ವಿಶ್ವತಿ ಕಾರ್ಯಕ್ರಮ ನಿರೂಪಿಸಿದರು.







